Advertisement

ತ್ಯಾಜ್ಯ ಘಟಕದ ಸುತ್ತ ಬಫ‌ರ್‌ ಜೋನ್‌

11:35 AM Jun 16, 2018 | Team Udayavani |

ಬೆಂಗಳೂರು: ದುರ್ವಾಸನೆ ತಡೆಯುವ ಉದ್ದೇಶದಿಂದ ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕದ ಸುತ್ತ 200 ಮೀ. ಬಫ‌ರ್‌ ವಲಯ ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. 

Advertisement

ಬಿಬಿಎಂಪಿ ಅಧಿಕಾರಿಗಳೊಂದಿಗೆ ಶುಕ್ರವಾರ ದೊಡ್ಡಬಿದರಕಲ್ಲು ಹಾಗೂ ಹೆಮ್ಮಿಗೆಪುರ ತ್ಯಾಜ್ಯ ಸಂಸ್ಕರಣೆ ಘಟಕಗಳ ಪರಿಶೀಲನೆ ನಡೆಸಿದ ಅವರು, ಘಟಕದ ಸುತ್ತ ಬಫ‌ರ್‌ ವಲಯ ನಿರ್ಮಾಣದಿಂದ ದುರ್ವಾಸನೆ ಪ್ರಮಾಣ ಕಡಿಮೆ ಮಾಡಬಹುದಿದ್ದು, ಜಮೀನು ಮಾಲೀಕರು, ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ದಂಡದಿಂದ ಪರಿಹಾರ ಸಿಗದು: ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಮರ್ಪಕವಾಗಿ ವಿಂಗಡಣೆ ಆಗದ ಕಾರಣ ಸಮಸ್ಯೆ ಸೃಷ್ಟಿಯಾಗುತ್ತಿದೆ. ಜನ ತ್ಯಾಜ್ಯ ವಿಂಗಡಿಸಿ ಕೊಡುವುದರಿಂದ ತ್ಯಾಜ್ಯ ವಿಲೇವಾರಿ ಸುಲಭವಾಗಲಿದೆ. ತ್ಯಾಜ್ಯ ವಿಂಗಡಣೆ ಮಾಡದವರು ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವುದು ಎರಡು ನಿಮಿಷದ ಕೆಲಸ. ಆದರೆ, ದಂಡದಿಂದ ಸಮಸ್ಯೆ ಪರಿಹಾರವಾಗದು. ಬದಲಿಗೆ ಸಮಸ್ಯೆಗೆ ಪರಿಹರಿಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.

ವಿಶೇಷ ಸಭೆ: ವೈಜ್ಞಾನಿಕವಾಗಿ ನಿರ್ಮಿಸಿರುವ ದೊಡ್ಡ ಬಿದರಕಲ್ಲು ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಅತ್ಯಾಧುನಿಕ ಯಂತ್ರಗಳಿದ್ದು, ನಿತ್ಯ 150 ಟನ್‌ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸು ಸಾಮರ್ಥ್ಯವಿದೆ. ಘಟಕದ ಸಾಮರ್ಥ್ಯ ವೃದ್ಧಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳು, ಇತರೆ ನಗರಗಳು ತ್ಯಾಜ್ಯಕ್ಕೆ ವ್ಯಯ ಮಾಡುತ್ತಿರುವ ಹಣದ ಪ್ರಮಾಣ ಹಾಗೂ ಪಾಲಿಕೆಯಲ್ಲಿ ತ್ಯಾಜ್ಯ ವಿಲೇವಾರಿಗೆ ವ್ಯಯಿಸುತ್ತಿರುವ ಹಣದ ಕುರಿತು ಮಾಹಿತಿ ಪಡೆಯಲು ವಿಶೇಷ ಸಭೆ ಕರೆಯಲಾಗುವುದು ಎಂದು ಸಚಿವರು ಹೇಳಿದರು. 

ಶಾಸಕ ಎಸ್‌.ಟಿ.ಸೋಮಶೇಖರ್‌, ಮೇಯರ್‌ ಆರ್‌.ಸಂಪತ್‌ರಾಜ್‌, ಎಂ.ಶಿವರಾಜು, ಬಿಬಿಎಂಪಿ ಆಯುಕ್ತ ಮಹೇಶ್ವರ್‌ರಾವ್‌, ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸಫ್ರಾಜ್‌ ಖಾನ್‌ ಹಾಜರಿದ್ದರು. 

Advertisement

ಡಿಸಿಎಂಗೆ ಘೇರಾವ್‌: ದೊಡ್ಡಬಿದರಕಲ್ಲು ಘಟಕಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಸ್ಥಳೀಯ ನಾಗರಿಕರು ಘೇರಾವ್‌ ಹಾಕಿದರು. “ಘಟಕದಿಂದ ಹೊಮ್ಮುತ್ತಿರುವ ದುರ್ವಾಸನೆಯಿಂದ ತೀವ್ರ ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ಸ್ಥಳೀಯರೊಂದಿಗೆ ಮಾತನಾಡಿದ ಡಿಸಿಎಂ, ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next