Advertisement

ಬಜೆಟ್‌ ವಾಸ್ತವಿಕತೆಯಿಂದ ರೂಪುಗೊಳ್ಳಬೇಕು: ಸಿದ್ಧರಾಮಯ್ಯ

10:11 PM Feb 03, 2022 | Team Udayavani |

ಬೆಂಗಳೂರು: ಬಜೆಟ್‌ ಅಂಕಿ-ಅಂಶಗಳು, ಆಲಂಕಾರಿಕ ಪದಗಳ ಪ್ರಯೋಗದಿಂದ ಆಕರ್ಷಕವಾಗಿದ್ದರೆ ಸಾಲದು. ಅದು ವಾಸ್ತವಿಕತೆಯ ಆಧಾರದಲ್ಲಿ ರೂಪುಗೊಳ್ಳಬೇಕು ಎಂದು ವಿಧಾನಸಭೆ ವಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

Advertisement

ವಿಧಾನಪರಿಷತ್ತಿನ ನೂತನ ಸದಸ್ಯರಿಗೆ ವಿಕಾಸಸೌಧದಲ್ಲಿ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ  “ವಿತ್ತೀಯ ಕಲಾಪ, ವಿಧೇಯಕಗಳು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಅಭಿವೃದ್ಧಿಯ ಪಾಲುದಾರಿಕೆ’ ಕುರಿತು ವಿಷಯ ಮಂಡಿಸಿ ಮಾತನಾಡಿದರು.

ಬಜೆಟ್‌ ಅತ್ಯಂತ ಪ್ರಮುಖವಾದದ್ದು. ಕಾಯಕ ಮತ್ತು ದಾಸೋಹ ಇದರ ಅರ್ಥ. ಅಂದರೆ, ಉತ್ಪಾದನೆ ಮತ್ತು ಹಂಚಿಕೆ. 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಹೀಗೆ ವ್ಯಾಖ್ಯಾನಿಸಿದ್ದರು ಎಂದರು.

ಕಲಾಪಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ:

ಸಾಮಾಜಿಕ ನ್ಯಾಯ ಹಾಗೂ ಅಶಕ್ತರ ಕಲ್ಯಾಣಕ್ಕಾಗಿ ವಿಧೇಯಕಗಳನ್ನು ರೂಪಿಸಬೇಕು. ಶಾಸಕರು ಅದರಲ್ಲಿ ತಪ್ಪದೇ ಭಾಗಿಯಾಗಬೇಕು. ಮೊದಲ ಬಾರಿ ಶಾಸಕರಾದವರು ನಾವು ಒಂದು ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದರೆ ಸಾಕು ಎನ್ನುತ್ತಾರೆ. ಒಂದು ಬಾರಿ ವಿಧಾನಸೌಧ ಪ್ರವೇಶಿಸಿ ಹೋದ‌ ಬಳಿಕ ಮತ್ತೆ ಅತ್ತ ಸುಳಿಯುವುದಿಲ್ಲ.  ವಿಧಾನ ಮಂಡಲದ ಕಾರ್ಯ ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ . ಇದು ಒಳ್ಳೆಯದಲ್ಲ ಎಂದರು.

Advertisement

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ,  ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತಿತರರು ಇದ್ದರು.

ಜನಸಾಮಾನ್ಯರ ಮೇಲೆ ತೆರಿಗೆ ಭಾರ:

ಜನಸಾಮಾನ್ಯರ ಮೇಲಿನ ತೆರಿಗೆಯ ಭಾರ ಹೆಚ್ಚುತ್ತಿರುವ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ಸಿದ್ದರಾಮಯ್ಯ  ಅಭಿಪ್ರಾಯಪಟ್ಟರು.

ಶ್ರೀಮಂತರು ಮಾತ್ರ ತೆರಿಗೆ ಕೊಡಬೇಕು ಎಂದು ಡಾ| ಬಿ.ಆರ್‌. ಅಂಬೇಡ್ಕರ್‌ ಹಾಗೂ ಅನೇಕ ಆರ್ಥಿಕ ತಜ್ಞರು ಈ ಹಿಂದೆ ಪ್ರತಿಪಾದಿಸಿದ್ದರು. ಶ್ರೀಮಂತರಿಂದ ತೆರಿಗೆ ವಸೂಲಿ ಮಾಡಿ ಅದನ್ನು ಬಡವರ ಕಲ್ಯಾಣಕ್ಕೆ ವಿನಿಯೋಗಿಸಬೇಕು ಎಂಬುದು ಅವರ ನಿಲುವು. ಇದು ಕಲ್ಯಾಣ ರಾಷ್ಟ್ರದ ಮೂಲ ತತ್ವವೂ ಆಗಿತ್ತು.  ನಮ್ಮಲ್ಲಿ ಈಗ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ರಾಜನಾದವನು ತೋಟ ಕಾಯುವ ಮಾಲಿ ರೀತಿ ಇರಬೇಕು. ಇದ್ದಲು ಮಾರುವ ವ್ಯಾಪಾರಿಯಂತಿರಬಾರದು ಎಂದು ಭೀಷ್ಮನು ಧರ್ಮರಾಯನಿಗೆ ಉಪದೇಶ ಮಾಡಿದ್ದ. ದುಂಬಿ ಮಕರಂದವನ್ನು ಹೀರಿದಂತೆ, ಹಾಲು ಕರೆಯುವಾಗ ಕುರುವಿಗೂ ಸ್ವಲ್ಪ ಮೀಸಲಿಡುವಂತೆ ತೆರಿಗೆ ವಿಧಿಸಬೇಕು. ಇದರ ಅರ್ಥ ಬಡವರ ಹಿತೃದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ವಿಧಿಸಬೇಕು ಎಂಬುದಾಗಿತ್ತು. ಆದರೆ, ಇತ್ತೀಚೆಗೆ ಶ್ರೀಮಂತರ ಮೇಲೆ ವಿಧಿಸುವ ತೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ. ಬಡವರ ಮೇಲಿನ ತೆರಿಗೆಯ ಹೊರೆ ಹೆಚ್ಚಾಗುತ್ತಿದೆ. ಕಾರ್ಪೊರೇಟ್‌ ಕಂಪೆನಿಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಶೇ.75 ಹಾಗೂ ಜನ ಸಾಮಾನ್ಯರ ಮೇಲಿನ ತೆರಿಗೆ ದರ ಶೇ.25 ಇತ್ತು. ಈಗ ಇದು ಅದಲು ಬದಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next