Advertisement

Finance: ಇಂದಿನಿಂದ ಸಂಸತ್‌ನ ಬಜೆಟ್‌ ಅಧಿವೇಶನ

12:38 AM Jan 31, 2024 | Team Udayavani |

ಹೊಸದಿಲ್ಲಿ: ಸಂಸತ್‌ನ ಬಜೆಟ್‌ ಅಧಿವೇಶನ ಬುಧವಾರ ಆರಂಭವಾಗಲಿದ್ದು, ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಧ್ಯಾಂತರ ಬಜೆಟ್‌ ಮಂಡಿಸಲಿದ್ದಾರೆ. ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವ ಕಾರಣ, ಲೇಖಾನುದಾನವಷ್ಟೇ ಮಂಡನೆಯಾಗಲಿದ್ದು, ಹೊಸ ಸರಕಾರ ಬಂದ ಮೇಲೆ ಪೂರ್ಣ ಪ್ರಮಾಣದ ಆಯವ್ಯಯ ಮಂಡನೆಯಾಗಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಎರಡನೇ ಅವಧಿಯ ಕೊನೆಯ ಬಜೆಟ್‌ ಆಗಿದೆ. ಸದ್ಯ ಇರುವುದು 17ನೇ ಲೋಕಸಭೆಯಾಗಿದ್ದು, ಅದರ ಕೊನೆಯ ಅಧಿವೇಶನವೂ ಆಗಿರಲಿದೆ.

Advertisement

ಈ ಅಧಿವೇಶನವು ಅಲ್ಪಾವಧಿಯದ್ದಾಗಿದ್ದು, ಜ.31ರಿಂದ ಫೆಬ್ರವರಿ 9ರ ವರೆಗೆ ಇರಲಿದೆ. ಬುಧವಾರ ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡುವ ಮೂಲಕ ಅಧಿವೇಶನ ಆರಂಭವಾಗಲಿದೆ.

ಸುಗಮ ಕಲಾಪದ ಉದ್ದೇಶದಿಂದ ಕೇಂದ್ರ ಸರಕಾರವು ಮಂಗಳವಾರ ಸರ್ವಪಕ್ಷಗಳ ಸಭೆ ನಡೆಸಿದೆ. ಅಲ್ಪಾವಧಿಯ ಅಧಿವೇಶನವಾದರೂ ವಿಪಕ್ಷಗಳು ಎತ್ತುವ ಪ್ರತಿಯೊಂದು ವಿಚಾರವನ್ನೂ ಚರ್ಚಿಸಲು ಸರಕಾರ ಸಿದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ  ಹೇಳಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ಎಐ ಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕಾಂಗ್ರೆಸ್‌ ಸಂಸದ ಪ್ರಮೋದ್‌ ತಿವಾರಿ, ಅಸ್ಸಾಂನಲ್ಲಿ ರಾಹುಲ್‌ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯ ಮೇಲಿನ‌ ದಾಳಿ ಬಗ್ಗೆ ಪ್ರಸಾವಿಸಿ, ದೇಶ ದಲ್ಲಿ ಅಘೋಷಿತ ಸರ್ವಾಧಿಕಾರ ಜಾರಿ ಯಲ್ಲಿದೆ ಎಂದು ಆರೋಪಿಸಿದರು.

ವಿಪಕ್ಷಗಳ ಸಂಸದರ ಅಮಾನತು ವಾಪಸ್‌

ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಅಮಾನತಾದ ವಿಪಕ್ಷಗಳ ಸಂಸದರ ಅಮಾನತನ್ನು ವಾಪಸ್‌ ಪಡೆಯು ವುದಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಘೋಷಿಸಿದ್ದಾರೆ. “ಎಲ್ಲರ ಅಮಾನತನ್ನು ವಾಪಸ್‌ ಪಡೆಯಲಾಗಿದೆ. ನಾನು ಲೋಕಸಭೆ ಸ್ಪೀಕರ್‌ ಮತ್ತು ರಾಜ್ಯಸಭೆ ಅಧ್ಯಕ್ಷರ ಬಳಿ ಮಾತನಾಡಿ, ಸರಕಾರದ ಪರವಾಗಿ ಮನವಿ ಸಲ್ಲಿಸಿದ್ದೇನೆ. ಸಂಸದರ ಅಮಾನತು ವಾಪಸ್‌ ಪಡೆದು, ಸದನಕ್ಕೆ ಬರಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ನಡೆದ ಸಂಸತ್‌ ಭದ್ರತೆ ಉಲ್ಲಂಘನೆ ಪ್ರಕರಣದ ಚರ್ಚೆಗೆ ಆಗ್ರಹಿಸಿ ಗದ್ದಲ ಎಬ್ಬಿಸಿದ್ದ ಹಿನ್ನೆಲೆಯಲ್ಲಿ ಎರಡೂ ಸದನಗಳ ಒಟ್ಟು 146 ಸಂಸದರನ್ನು ಅಮಾನತು ಮಾಡಲಾಗಿತ್ತು.

Advertisement

ಸಹಕಾರ ಬೇಕು

ಅಧಿವೇಶನದಲ್ಲಿ ಎಲ್ಲ ವಿಚಾರಗಳನ್ನು ಚರ್ಚೆ ನಡೆಸಲಾಗುತ್ತದೆ ಎಂದು ಸರಕಾರ ಭರವಸೆ ನೀಡಿದೆ.  ವಿಪಕ್ಷಗಳು ಸಹಕರಿಸಬೇಕು.

ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

ಹಲವು ವಿಷಯ ಪ್ರಸ್ತಾವ

ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ, ಕೃಷಿ ಕ್ಷೇತ್ರದ ಸಮಸ್ಯೆ, ಮಣಿಪುರ ಸ್ಥಿತಿಗಳ ಕುರಿತು ಪ್ರಸ್ತಾವಿಸಲು ತೀರ್ಮಾನಿಸಿದ್ದೇವೆ.

ಕೆ.ಸುರೇಶ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next