Advertisement

ಬಜೆಟ್ ಕಿರುವಿಮರ್ಶೆ: ರೈತರ ಕೃಷಿ ಆದಾಯ ಇಮ್ಮಡಿಗೆ ಭರಪೂರ ಕೊಡುಗೆ

09:59 AM Feb 02, 2020 | keerthan |

ಮಣಿಪಾಲ: 2020-21ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಸಾಲದ ಗುರಿ 15 ಲಕ್ಷ ಕೋ.ರೂ. ಗೇರಿಕೆ, ನಬಾರ್ಡ್‌ ಮರು ವಿತ್ತೀಯ ಸ್ಕೀಂ ವಿಸ್ತರಣೆ, ಶೀಘ್ರ ಕೊಳೆಯುವ ಕೃಷಿ ಉತ್ಪನ್ನಗಳು, ಮಾಂಸ, ಮೀನು, ಡೈರಿ ಉತ್ಪನ್ನಗಳ ತ್ವರಿತ ಸಾಗಾಟಕ್ಕಾಗಿ ಸರಕಾರಿ – ಖಾಸಗಿ ಸಹಭಾಗಿತ್ವದಲ್ಲಿ ಭಾರತೀಯ ರೈಲ್ವೆಯಿಂದ ಕಿಸಾನ್‌ ರೈಲು ಪ್ರಾರಂಭ ಹಾಗೂ ಆಯ್ದ ಎಕ್ಸ್‌ಪ್ರಸ್‌ ರೈಲುಗಳು ಮತ್ತು ಗೂಡ್ಸ್‌ ರೈಲುಗಳಿಗೆ ಶೈತ್ಯ ಬೋಗಿಗಳ ಜೋಡಣೆ . ಇವು ನಿರ್ಮಲಾ ಸೀತಾರಾಮನ್‌ ಕೃಷಿ ಕ್ಷೇತ್ರಕ್ಕೆ ನೀಡಿರುವ ಪ್ರಮುಖ ಕೊಡುಗೆಗಳು.

Advertisement

ಕೃಷಿ ಉತ್ಪನ್ನಗಳನ್ನು ಕ್ಷಿಪ್ರವಾಗಿ ದೇಶದ ವಿವಿಧ ಭಾಗಗಳಿಗೆ ಅಂತೆಯೇ ವಿದೇಶಗಳಿಗೆ ಸಾಗಿಸಲು ಪೌರ ವಾಯುಯಾನ ಇಲಾಖೆ ವತಿಯಿಂದ ಕೃಷಿ ಉಡಾನ್‌ ಪ್ರಾರಂಭ, ಕ್ಲಸ್ಟರ್‌ ನೆಲೆಯಲ್ಲಿ ಒಂದು ಜಿಲ್ಲೆಯಲ್ಲಿ ಒಂದು ತೋಟಗಾರಿಕಾ ಬೆಳೆಯ ಪ್ರವರ್ತನೆ, 311 ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳ ಉತ್ಪಾದನೆ ಹೀಗೆ ಇನ್ನೂ ಹಲವು ಮಹತ್ವಾಕಾಂಕ್ಷಿ ಯೋಜನೆಗಳು ಬಜೆಟ್‌ನಲ್ಲಿವೆ.

ಸ್ವಸಹಾಯ ಗುಂಪುಗಳಿಗೆ ಹಳ್ಳಿಗಳಲ್ಲಿ ಕೃಷಿ ದಾಸ್ತಾನು ಸೌಲಭ್ಯಗಳನ್ನು ಪ್ರಾರಂಭಿಸಲು ಅನುಮತಿ ಕೊಡುವುದು, ಮತ್ಸ್ಯ ಸಂಪತ್ತಿನ ಉಳಿವು ಮತ್ತು ಅಭಿವೃದ್ಧಿಗಾಗಿ ಸಾಗರ ಮಿತ್ರಾ ಯೋಜನೆ ಮುಂಗಡ ಪತ್ರದಲಿದೆ.

ಪ್ರಧಾನ್‌ ಮಂತ್ರಿ ಕಿಸಾನ್‌ ಊರ್ಜಾ ಸುರಕ್ಷಾ ಉತ್ಥಾನ್‌ ಮಹಾಭಿಯಾನ್‌ (ಪಿಎಂಕುಸುಮ್‌) ಯೋಜನೆಯನ್ನು ವಿಸ್ತರಿಸಿ 20 ಲಕ್ಷ ರೈತರಿಗೆ ಸೋಲಾರ್‌ ಪಂಪ್‌ಗಳನ್ನು ಅಳವಡಿಸಿಕೊಳ್ಳಲು ಹಣಕಾಸಿನ ನೆರವು ನೀಡುವುದು ಒಂದು ಮಹತ್ವದ ಘೋಷಣೆ. ಇದು ಕಾರ್ಯಗತಗೊಂಡರೆ ಕೃಷಿಕರಿಗೆ ವರದಾನವಾಗಲಿದೆ. ಹಿಂದಿನ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿ 34,422 ಕೋ. ರೂ. ಅನುದಾನವನ್ನು ಒದಗಿಸಲಾಗಿತ್ತು. ಆದರೆ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಬಂಜರು ಮತ್ತು ಹಡಿಲು ಭೂಮಿಯನ್ನು ಫ‌ಲವತ್ತಾಗಿ ಮಾಡುವಲ್ಲಿ ಈ ಯೋಜನೆ ನೆರವಾಗಬಹುದು. ಕೃಷಿಗೆ ನೀರೆತ್ತಲು ಡೀಸಿಲ್‌ ಮತ್ತು ಸೀಮೆಎಣ್ಣೆಯ ಅವಲಂಬನೆಯನ್ನು ಕಡಿಮೆಗೊಳಿಸುವಲ್ಲಿ ಇದು ಸಹಕಾರಿಯಾಗಲಿದೆ.

ಕೃಷಿ ಮತ್ತು ಕೃಷಿಕರ ಕ್ಷೇಮಾಭಿವೃದ್ಧಿಗಾಗಿ 16 ಅಂಶಗಳ ಕ್ರಿಯಾ ಯೋಜನೆ ರೂಪಿಸುವ ಭರವಸೆಯನ್ನು ನಿರ್ಮಲಾ ನೀಡಿದ್ದಾರೆ. ಒಟ್ಟಾರೆಯಾಗಿ 2022ಕ್ಕಾಗುವಾಗ ಕೃಷಿಕರ ಆದಾಯವನ್ನು ಇಮ್ಮಡಿಗೊಳಿಸುವ ಮೋದಿ ಸರಕಾರದ ಭರವಸೆಯನ್ನು ಹಣಕಾಸು ಸಚಿವೆ ಗಂಭೀರವಾಗಿ ಪರಿಗಣಿಸಿರುವುದು ಬಜೆಟ್‌ನಲ್ಲಿ ಸ್ಪಷ್ಟವಾಗುತ್ತಿದೆ.

Advertisement

ರೈಲುಗಳಿಗೆ ಶೈತ್ಯ ಬೋಗಿಗಳನ್ನು ಜೋಡಿಸುವ ಪ್ರಸ್ತಾವ 2009-10ನೇ ಸಾಲಿಗೆ ಆಗ ರೈಲ್ವೇ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಮಂಡಿಸಿದ ರೈಲ್ವೇ ಮುಂಗಡ ಪತ್ರದಲ್ಲೂ ಇತ್ತು. ಆದರೆ ಇದು ಘೋಷಣೆಗಷ್ಟೇ ಸೀಮಿತವಾಗಿತ್ತು. ಈ ಘೋಷಣೆ ಕಾರ್ಯಗತಗೊಂಡದ್ದೇ ಆದರೆ ಶೀಘ್ರ ಕೊಳೆಯುವ ಆಹಾರ ವಸ್ತುಗಳ ಶೀಘ್ರ ಸಾಗಾಟವಾಗುವುದು ಮಾತ್ರವಲ್ಲದೆ ರಸ್ತೆಗಳ ಮೇಲಿನ ದಟ್ಟಣೆಯೂ ಕಡಿಮೆಯಾಗಲಿದೆ. ಮೀನಿನಂಥಹ ಆಹಾರ ವಸ್ತುಗಳನ್ನು ಸಾಗಿಸಲು ವಾಹನಗಳು ಶರವೇಗದಿಂದ ಸಾಗುವ ಅಗತ್ಯವಿದೆ. ದೇಶಾದ್ಯಂತ ನೂರಾರು ಟ್ರಕ್‌ಗಳು ಮತ್ಸ್ಯ ಮತ್ತು ಮತ್ಸ್ಯ ಉತ್ಪನ್ನಗಳನ್ನು ತರಾತುರಿಯಿಂದ ಸಾಗಿಸವುದು ನಿತ್ಯದ ನೋಟ.

ಕೃಷಿ ಕ್ಷೇತ್ರಕ್ಕೆ ತಕ್ಕಮಟ್ಟಿನ ಕೊಡುಗೆ ಸಿಕ್ಕಿದ್ದರೂ ಈ ಕ್ಷೇತ್ರ ಎದುರಿಸುವತ್ತಿರುವ ಇನ್ನೂ ಕೆಲವು ಗಂಭೀರ ಸವಾಲುಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ಸಿಕ್ಕಿಲ್ಲ. ಕೃಷಿ ಕಾರ್ಮಿಕರ, ಸಮಸ್ಯೆ, ರಸಗೊಬ್ಬರ, ಕೃಷಿ ಸಲಕರಣೆಗಳು, ಜಲ ಸಂರಕ್ಷಣೆ ಹೀಗೆ ಇನ್ನೂ ಹಲವು ಆಯಾಮಗಳತ್ತ ದೃಷ್ಟಿ ಹರಿಸುವ ಅಗತ್ಯವಿತ್ತು. ಕೃಷಿ ಮತ್ತು ಕೃಷಿಯೇತರ ವಲಯಗಳನ್ನು ಸಂಪರ್ಕಿಸುವುದು ಆಗಬೇಕಾಗಿರುವ ಇನ್ನೊಂದು ಕೆಲಸ. ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರ ಸಂಖ್ಯೆಯೇ ಅಧಿಕವಿದ್ದು ಅವರ ಆದಾಯದಲ್ಲಿಲ್ಲ. ಗುಣಾತ್ಮಕವಾದ ಬದಲಾವಣೆ ಆದರೆ ಮಾತ್ರ ಕೃಷಿಕರ ಆದಾಯ ದ್ವಿಗುಣಗೊಳ್ಳುವ ಗುರಿ ಈಡೇರಬಹುದು.

– ಉಮೇಶ್ ಕೋಟ್ಯಾನ್

Advertisement

Udayavani is now on Telegram. Click here to join our channel and stay updated with the latest news.

Next