Advertisement

ಬಜೆಟ್‌ ಪೂರ್ವಭಾವಿ ಸಭೆ: ಆರೋಪಗಳ ಸುರಿಮಳೆ

04:27 PM Feb 13, 2021 | Team Udayavani |

ಶಿವಮೊಗ್ಗ: ಸಾರ್ವಜನಿಕರ ಹಣ ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಕಳೆದ ವರ್ಷಗಳಲ್ಲಿ ಮೀಸಲಿಟ್ಟ ಹಣ ಕೂಡ ಸಮರ್ಪಕವಾಗಿ ಖರ್ಚಾಗುತ್ತಿಲ್ಲ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಶುಕ್ರವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಆರೋಪಿಸಿದರು.

Advertisement

ಸಭೆ ಆರಂಭವಾಗುತ್ತಿದ್ದಂತೆ ಸಂಘಟನೆಗಳ ಪ್ರಮುಖರು ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿ ವರ್ಷವೂ ಬಜೆಟ್‌ ಪೂರ್ವಭಾವಿ ಸಭೆಗೆ ಸಾರ್ವಜನಿಕರನ್ನು ಮತ್ತು ಸಂಘ ಸಂಸ್ಥೆಗಳ ಮುಖಂಡರನ್ನು ಕರೆಸುತ್ತೀರಿ. ಆದರೆ, ಯಾವುದೇ ನಡಾವಳಿಯನ್ನೂ ದಾಖಲೆಗೊಳಿಸುವುದಿಲ್ಲ. ಅಭಿಪ್ರಾಯಗಳನ್ನು ಸಮರ್ಥವಾಗಿ ನಿಭಾಯಿಸುವುದಿಲ್ಲ. ಸಲಹೆಗಳನ್ನು ಸ್ವೀಕರಿಸುವುದಿಲ್ಲ. ಇದೊಂದು ಕಾಟಾಚಾರಕ್ಕೆ ನಡೆಯುವ ಸಭೆಯಾಗಿದೆ ಎಂದು ದೂರಿದರು.

ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಕಳಪೆಯಾಗಿ ನಡೆಯುತ್ತಿವೆ. ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದ್ದರೂ ಅ ಧಿಕಾರಿಗಳು ಗಮನಿಸುತ್ತಿಲ್ಲ. ಜನರ ತೆರಿಗೆ ಹಣ ಪೋಲಾಗುತ್ತಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಕೆ.ವಿ. ವಸಂತಕುಮಾರ್‌ ಹಾಗೂ ಸತೀಶ್‌ ಕುಮಾರ್‌ ಶೆಟ್ಟಿ ಆರೋಪಿಸಿದರು.

ನಗರದಲ್ಲಿ ಶೌಚಾಲಯಗಳ ದುರಸ್ತಿ ಕಾರ್ಯ ಆಗಿದೆ ಎಂದು ಹೇಳುತ್ತೀರಿ. ಆದರೆ, ಎಲ್ಲಿ ಆಗಿದೆ ತೋರಿಸಿ ಎಂದು ವಸಂತ್‌ ಕುಮಾರ್‌ ಪ್ರಶ್ನಿಸಿದರೆ, ಸತೀಶ್‌ ಕುಮಾರ್‌ ಶೆಟ್ಟಿ ಕುಡಿಯುವ ನೀರಿನ ಕಾಮಗಾರಿಗೆ ಸಂಬಂ ಧಿಸಿದಂತೆ ಅವ್ಯವಹಾರ ಕೂಡ ನಡೆದಿದೆ. ಹಾಗೂ ನಗರದಲ್ಲಿ ಸಿಮೆಂಟ್‌ ರಸ್ತೆಗಳು ಬೇಡ ಎಂದು ಜನ ಹೇಳಿದ್ದರು. ಆದರೂ ಸಿಮೆಂಟ್‌ ರಸ್ತೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಸಂಬಂಧಿ ಸಿದಂತೆ ಪಾಲಿಕೆ ಆಯುಕ್ತರು ಸಮಜಾಯಿಷಿ ನೀಡಲು ಮುಂದಾದಾಗ ಪರಸ್ಪರ ವಾಗ್ವಾದ ಕೂಡ ನಡೆಯಿತು. ಮಧ್ಯಪ್ರವೇಶ ಮಾಡಿದ ಉಪ ಮೇಯರ್‌ ಸುರೇಖಾ ಮುರಳೀಧರ್‌ ಸಮಾಧಾನಪಡಿಸಿದರು. ಇನ್ನು ಮುಂದೆ ಸಿಮೆಂಟ್‌ ರಸ್ತೆಗಳನ್ನು ಮಾಡುವುದಿಲ್ಲ ಎಂದರು.

Advertisement

ಕಳೆದ ವರ್ಷದ ವಿವರಗಳನ್ನೆಲ್ಲಾ ತಪ್ಪು ತಪ್ಪಾಗಿ ಮುದ್ರಿಸಲಾಗಿದೆ. ಯಾವುದೇ ನಡಾವಳಿಗೂ ಸಹಿ ಕೂಡ ಹಾಕಿಸಿಲ್ಲ. ಈ ಬಾರಿಯ ಬಜೆಟ್‌ ನಲ್ಲಾದರೂ ಸಮರ್ಪಕವಾಗಿ ಹಣ ಮೀಸಲಾಗಿಡಿ. ಜನರ ತೆರಿಗೆ ಹಣ ಪೋಲಾಗದಂತೆ ಗಮನಹರಿಸಿ ಎಂದು ಸಲಹೆ ನೀಡಿದರು.

ನಗರಸಭೆ ಮಾಜಿ ಸದಸ್ಯ ಆರ್‌. ಸತ್ಯನಾರಾಯಣ್‌ ಮಾತನಾಡಿ, ವಿನೋಬನಗರದ ಶಿವಾಲಯದ ಬಳಿ ಕೋಟ್ಯಂತರ ರೂ. ಖರ್ಚುಮಾಡಿ ಮಾರ್ಕೇಟ್‌ ನಿರ್ಮಿಸಲಾಗಿದೆ. ಹೋದ ವರ್ಷದ ಬಜೆಟ್‌ ನಲ್ಲಿಯೇ ಹಣ ಮೀಸಲಿಡಲಾಗಿತ್ತು. ಆದರೆ, ಯಾವ ಪ್ರಯೋಜನವೂ ಇಲ್ಲವಾಗಿದೆ. ಸಾರ್ವಜನಿಕರ ತೆರಿಗೆ ಹಣ ಹೀಗೆ ಖರ್ಚಾಗುತ್ತಿದ್ದು, ಮತ್ತೆ ಇದರ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ ಎಂದು ದೂರಿದರು.

ಇದನ್ನೂ ಓದಿ :28 ರಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಅಭಿನಂದನೆ

ಮಾದಿಗ ದಂಡೋರ ಸಮಿತಿ ಮುಖಂಡ ಮೂರ್ತಿ ಮಾತನಾಡಿ, ಪಾಲಿಕೆಯಲ್ಲಿ ಪರಿಶಿಷ್ಟರಿಗೆಂದು ಪ್ರತಿವರ್ಷ ಹಣ ನಿಗದಿಪಡಿಸಲಾಗುತ್ತದೆ. ಆದರೆ, ಇದರ ಸಮರ್ಪಕ ಬಳಕೆ ಆಗುತ್ತಿಲ್ಲ. ಪರಿಶಿಷ್ಟರ ಕಲ್ಯಾಣಕ್ಕಾಗಿ ಪಾಲಿಕೆ ಏನೂ ಮಾಡುತ್ತಿಲ್ಲ. ಪಾಲಿಕೆಯಲ್ಲಿರುವ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿಯೂ ಏನೂ ಮಾಡುತ್ತಿಲ್ಲ. ವರ್ಷಕ್ಕೊಂದು ಬಾರಿ ಪ್ರವಾಸಕ್ಕೆ ಕರೆದುಕೊಂಡು ಹೋದರೆ ಮುಗಿಯಿತೇ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಮೇಯರ್‌ ಸುವರ್ಣಾ ಶಂಕರ್‌, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next