ಕಲಬುರಗಿ: ರಾಜ್ಯ ಬಜೆಟ್‌ನಲ್ಲಿ ಮತ್ತೆ ಗೌಳಿ ಸಮಾಜಕ್ಕೆ ಅನ್ಯಾಯವಾಗಿದ್ದು, ಈಗ ಹೋರಾಟಕ್ಕೆ ಮುಂದಾಗಿ ಮಾ. 21ರಂದು ಜಿಲ್ಲಾಧಿಕಾರಿ ಕಚೇರಿ ಎದರುಗಡೆ ಗೌಳಿ ಸಮಾಜದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗೌಳಿ ಸಮಾಜದ ಮುಖಂಡ ಸುಭಾಷ ಗೌಳಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗೌಳಿ ಜನಾಂಗವು ಕಳೆದ 47 ವರ್ಷಗಳಿಂದ ಸರ್ಕಾರದ ಮುಂದೆ ಮಂಡಿಸುತ್ತಿರುವ ಬೇಡಿಕೆಗಳನ್ನು ಈಡೇರಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿಯೂ ಬೇಡಿಕೆಗಳನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವಂತೆ 1981ರಿಂದ 2017ರ ವರೆಗೆ ಆಡಳಿತದಲ್ಲಿರುವ ಸರ್ಕಾರಗಳಿಗೆ ಸಲ್ಲಿಸುತ್ತ ಬಂದರೂಯಾವುದೇ ಪ್ರಯೋಜನ ಆಗಿಲ್ಲ.
ಈಗಲೂ ಸಹ ಅದೇ ರೀತಿಯ ಅನ್ಯಾಯ ಮುಂದುವರಿದಿದೆ. ತಮ್ಮ ಬೇಡಿಕೆಗಳ ಧ್ವನಿಗೆ ಕೇವಲ ಪತ್ರಿಕೆಗಳು ಹಾಗೂ ಮಾಧ್ಯಮದವರು ಮಾತ್ರ ಸ್ಪಂದಿಸುತ್ತಾರೆ. ಸರ್ಕಾರದಿಂದ ಮಾತ್ರ ಯಾವುದೇ ಸ್ಪಂದನೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾವನೂರು ವರದಿಯಲ್ಲಿ ಗೌಳಿ ಜನಾಂಗ ಮೀಸಲಾತಿ ಪಟ್ಟಿಯಲ್ಲಿ ನೋಂದಣಿ ಆಗಿದ್ದು, ಇಲ್ಲಿಯವರೆಗೆ ನ್ಯಾಯ ದೊರಕಿಲ್ಲ.
ಗೌಳಿ ಜನಾಂಗದವರಿಗೆ ಹೈನುಗಾರಿಕೆ, ಪಶು ಪಾಲನೆಗೆ 100 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ, ಪ್ರತಿ ಕುಟುಂಬಕ್ಕೆ 12 ಲಕ್ಷ ರೂ.ಗಳು, ಹೈದ್ರಾಬಾದ ಕರ್ನಾಟಕದಲ್ಲಿ ಭೀಕರ ಬರಗಾಲ ಇರುವುದರಿಂದ ಪ್ರತಿ ಎಮ್ಮೆಯ ಸಂರಕ್ಷಣೆಗೆ 10,000 ರೂ.ಗಳ ಪರಿಹಾರ ಧನ ಒದಗಿಸುವಂತೆ, ಪ್ರತಿ ಊರಿನಲ್ಲಿ ಗೌಳಿ ಘಾಟ್ ನಿರ್ಮಿಸುವಂತೆ, ಪಶು ಸಂಗೋಪನೆ ಇಲಾಖೆಯಿಂದ ಜಾನುವಾರುಗಳಿಗೆ ಉಪಚಾರ ಮಾಡುವಂತೆ,
ಜಾನುವಾರುಗಳಿಗಾಗಿ ಚುನ್ನಿ, ಭೂಸಾ, ಹಿಂಡಿ ಮತ್ತು ಮೇವು ಪಡಿತರ ಚೀಟಿಯ ಮೂಲಕ ಒದಗಿಸಬೇಕೆಂದು ಒತ್ತಾಯಿಸಿದರು. ಸಮಾಜದ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟರೆ ಮಾರ್ಚ್ 18 ರಂದು ನಗರಕ್ಕೆ ಆಗಮಿಸುವ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು. ಕರ್ನಾಟಕ ರಾಜ್ಯ ಗೌಳಿಗರ ಸಂಘದ ಜಿಲ್ಲಾಧ್ಯಕ್ಷೆ ನಿವೇದಿತಾ ದಹಿಂಡೆ, ತುಕಾರಾಂ ಗೌಳಿ ಹಾಜರಿದ್ದರು.