ಹುಬ್ಬಳ್ಳಿ/ಹಾವೇರಿ: ಮುಂದಿನ ಬಜೆಟ್‌ನಲ್ಲಿ ಪೊಲೀಸರಿಗೆ ವಸತಿ ಗೃಹ ನಿರ್ಮಾಣಕ್ಕೆ ದೊಡ್ಡ ಪ್ರಮಾಣದ ಅನುದಾನ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಾವೇರಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನೆರೆ ಸಂತ್ರಸ್ತರ ಪರಿಹಾರ ಕಾರ್ಯ ಪರಿಶೀಲಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಔರಾದ್ಕರ್ ವರದಿಗೆ ಕೆಲ ಬದಲಾವಣೆ ಮಾಡಬೇಕಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಸೇರ್ಪಡೆಗೊಳಿಸಿ ವರದಿ ಜಾರಿಗೊಳಿಸಲಾಗುವುದು ಎಂದರು. ಈ ಬಾರಿ ಹಿಂದೆಂದೂ ಕಾಣದಂತಹ ಭೀಕರ ನೆರೆ ಹಾವಳಿಗೆ ರಾಜ್ಯ ತುತ್ತಾಗಿದ್ದು, ಅದಕ್ಕೆ ದೊಡ್ಡ ಪ್ರಮಾಣದಲ್ಲಿ ರಾಜ್ಯ ಸರ್ಕಾರ ಪರಿಹಾರ ಹಣ ಕೊಟ್ಟಿದೆ. ಸದ್ಯ ಪರಿಸ್ಥಿತಿ ಹೀಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ರೈತರ ಸಾಲ ಮನ್ನಾ ಇಲ್ಲ ಎಂದು ಹೇಳಿದ್ದಾರೆ. ನೆರೆ ಪರಿಸ್ಥಿತಿ ಇರುವಾಗ ಮೋಡ ಬಿತ್ತನೆ ಮಾಡುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ ಎಂದರು.
ಎಟಿಎಸ್ ಬಲವರ್ಧನೆಗೆ ಕ್ರಮ: ಬಳಿಕ ಹುಬ್ಬಳ್ಳಿಯಲ್ಲಿ ಮಾತನಾಡಿ, ಭಯೋತ್ಪಾದಕರ ನಿಗ್ರಹಕ್ಕೆ ರಾಜ್ಯದಲ್ಲಿ ಉಗ್ರರ ನಿಗ್ರಹ ದಳ ಸ್ಥಾಪನೆ ಮಾಡಲಾಗಿದ್ದು, ಎಟಿಎಸ್‌ಗೆ ಸಮರ್ಥ ಹಾಗೂ ಅನುಭವಿ ಅಧಿಕಾರಿಗಳ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಈಗಾಗಲೇ ಎಟಿಎಸ್ ಇದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಎಟಿಎಸ್ ಪೊಲೀಸ್ ಠಾಣೆಗಳಿವೆ. ಆದರೆ, ಬೆಂಗಳೂರಿನಲ್ಲಿ ದೊಡ್ಡ ಜನಸಂಖ್ಯೆ ಹಾಗೂ ಕೆಲ ಮಾಹಿತಿಗಳ ಮೇರೆಗೆ ನಗರಕ್ಕೆ ಸೀಮಿತವಾದ ಎಟಿಎಸ್ ರಚಿಸುವ ಚಿಂತನೆ ಇದೆ. ಅದನ್ನು ಕಾರ್ಯಗತಗೊಳಿಸಲಾಗುವುದು.
ಇದನ್ನು ಸದೃಢಗೊಳಿಸಲು ಸಮರ್ಥ, ಅನುಭವಿ ಅಧಿಕಾರಿಗಳು ಹಾಗೂ ಪಡೆಯ ಜೊತೆ ಅತ್ಯಾಧುನಿಕ ತಂತ್ರಜ್ಞಾನ, ಶಸ್ತ್ರಾಸ್ತ್ರ ಹಾಗೂ ಸಿಬ್ಬಂದಿ ಒದಗಿಸಲಾಗುವುದು. ಈ ಹಿಂದೆ ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಉಗ್ರ ಸಂಘಟನೆ ಗಳ ಚಟುವಟಿಕೆಗಳ ಬಗ್ಗೆ ನಮ್ಮ ರೆಡಾರ್‌ನಲ್ಲಿ ಮಾಹಿತಿ ಇದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಎಟಿಎಸ್‌ನ್ನು ಇನ್ನಷ್ಟು ಬಲವರ್ಧನೆಗೊಳಿಸಲಾಗುವುದು ಎಂದರು.