Advertisement

Budget Discussion; ಆಡಳಿತ ವೈಫ‌ಲ್ಯವನ್ನು ಅಧಿವೇಶನದಲ್ಲಿ ಮುನ್ನೆಲೆಗೆ ತರಲು ವಿಪಕ್ಷ ಸಜ್ಜು

11:15 PM Feb 18, 2024 | Team Udayavani |

ಬೆಂಗಳೂರು: ಒಂದು ವಾರದಿಂದ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ಕಲಾಪಗಳು ಸೋಮವಾರದಿಂದ ಮುಂದುವರಿಯಲಿದ್ದು, ರಾಜ್ಯಪಾಲರ ಭಾಷಣ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 3.71 ಲಕ್ಷ ಕೋಟಿ ರೂ. ಬಜೆಟ್‌ ಮೇಲೆ ಚರ್ಚೆ ಕಾವೇರಲಿದೆ.

Advertisement

ಕೇಂದ್ರ ಸರಕಾರದಿಂದ ಬರ ಪರಿಹಾರ ಸಿಕ್ಕಿಲ್ಲ, ಅನುದಾನಗಳು ಸರಿಯಾಗಿ ಸಿಗುತ್ತಿಲ್ಲ ಎಂಬುದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖವಾಗಿತ್ತಲ್ಲದೆ, ಅದೇ ಧಾಟಿಯ ಅಂಶಗಳನ್ನು ರಾಜ್ಯ ಬಜೆಟ್‌ನಲ್ಲೂ ಪ್ರಸ್ತಾವಿಸಲಾಗಿದೆ.

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನನ್ನ ತೆರಿಗೆ, ನನ್ನ ಹಕ್ಕು ಅಭಿಯಾನದ ಮೂಲಕ ಕೇಂದ್ರದ ವಿರುದ್ಧ ಸೆಣಸಾಟಕ್ಕೆ ನಿಂತಿರುವ ರಾಜ್ಯ ಕಾಂಗ್ರೆಸ್‌ ಸರಕಾರ ಒಂದೆಡೆಯಾದರೆ, ಕೇಂದ್ರ ಸರಕಾರದ ಸಮರ್ಥನೆಯ ಜತೆಗೆ ರಾಜ್ಯ ಸರಕಾರದ 8 ತಿಂಗಳ ಆಡಳಿತ ವೈಫ‌ಲ್ಯವನ್ನು ಚರ್ಚೆಯ ಮುನ್ನೆಲೆಗೆ ತರಲು ವಿಪಕ್ಷಗಳು ಸೆಣೆಸುತ್ತಿವೆ.

ಮೈತ್ರಿಯಾದರೂ ಒಂಟಿ ಹೋರಾಟ?
ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಜಂಟಿ ಹೋರಾಟ ನಡೆಸುವುದಾಗಿ ಹೇಳಿದ್ದ ಬಿಜೆಪಿ ಹಾಗೂ ಜೆಡಿಎಸ್‌, ಒಂಟಿ ಹೋರಾಟವನ್ನೇ ಮುಂದುವರಿಸಿದ್ದು, ವಿಧಾನಸಭೆಯಲ್ಲಿ ಕೊಬ್ಬರಿಗೆ ರಾಜ್ಯಸರಕಾರದಿಂದ ಸಹಾಯಧನ ಕೊಡಬೇಕೆಂಬ ಜೆಡಿಎಸ್‌ನ ಹೋರಾಟಕ್ಕೆ ಬಿಜೆಪಿ ಬೆಂಬಲಿಸಿದ್ದು ಅಷ್ಟಕ್ಕಷ್ಟೇ. ಕಾನೂನು-ಸುವ್ಯವಸ್ಥೆ ವಿಚಾರದಲ್ಲಿ ಹೋರಾಟ ಕೈಗೊಂಡ ಬಿಜೆಪಿಗೆ ಕೆಳಮನೆಯಲ್ಲಿ ಜೆಡಿಎಸ್‌ ಸಾಥ್‌ ಸಿಗಲೇ ಇಲ್ಲ. ಮೇಲ್ಮನೆಯಲ್ಲೂ ಬಿಜೆಪಿ-ಜೆಡಿಎಸ್‌ನ ಹೊಂದಾಣಿಕೆ ಎದ್ದು ಕಾಣಲಿಲ್ಲ. ಇನ್ನೂ 5 ದಿನಗಳ ಕಾಲ ನಡೆಯಲಿರುವ ಕಲಾಪದಲ್ಲಿ ವಿಪಕ್ಷಗಳು ಯಾವ ಅಸ್ತ್ರಗಳನ್ನು ಪ್ರಯೋಗಿಸಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸರಕಾರಕ್ಕೆ ಸವಾಲಾಗದ ವಿಪಕ್ಷ
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜೆಡಿಎಸ್‌ ನಾಯಕ ಎಚ್‌. ಡಿ. ಕುಮಾರಸ್ವಾಮಿ ಅವರು ಸರಕಾರಕ್ಕೆ ಕೊಂಚ ಬಿಸಿ ಮುಟ್ಟಿಸಿದ್ದು ಬಿಟ್ಟರೆ, ಒಟ್ಟಾರೆಯಾಗಿ ಸರಕಾರವನ್ನು ಕಟ್ಟಿ ಹಾಕುವ ಬಹಳ ದೊಡ್ಡ ಪ್ರಯತ್ನವೇನೂ ಕಂಡುಬರಲಿಲ್ಲ. ಮಂಡ್ಯದ ಕೆರಗೋಡಿನ ಹನುಮಧ್ವಜ, ಮಂಗಳೂರಿನ ಶಾಲಾ ಶಿಕ್ಷಕಿಯಿಂದ ಕೋಮುದ್ವೇಷದ ಪಾಠ ಸಹಿತ ಕೆಲವೇ ವಿಚಾರಗಳಲ್ಲಿ ವಿಪಕ್ಷಗಳು ಸರಕಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಕೊಟ್ಟಿವೆ. ಉಳಿದಂತೆ ಸರಕಾರದ ಪಾಲಿಗೆ ವಿಪಕ್ಷ ಯಾವುದೇ ದೊಡ್ಡ ರೀತಿಯ ಸವಾಲಾಗಿ ಪರಿಣಮಿಸಿಲ್ಲ.

Advertisement

ಇನ್ನೂ 12-15 ಮಸೂದೆ ಮಂಡನೆ?
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅನುಮೋದನೆ ನೀಡುವ ಮೂಲಕ ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಗೆ ಅಸ್ತು ಎನ್ನಲಾಗಿದ್ದು, ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಮೀಸಲಾತಿ ನೀಡುವ ಎರಡು ವಿಧೇಯಕಗಳಿನ್ನೂ ಚರ್ಚೆ ಹಂತದಲ್ಲಿವೆ. ಇದಲ್ಲದೆ ಧನವಿನಿಯೋಗ ಮಸೂದೆ ಸಹಿತ 12 ರಿಂದ 15 ಮಸೂದೆಗಳು ಈ ಬಾರಿ ಮಂಡನೆಯಾಗುವ ಸಾಧ್ಯತೆಗಳಿವೆ. ವಿಧಾನಸಭೆ ಕಲಾಪವನ್ನು ಬೆಳಗ್ಗೆ 9.30ಕ್ಕೇ ಆರಂಭಿಸುತ್ತಿರುವುದಕ್ಕೆ ಸ್ಪೀಕರ್‌ ಖಾದರ್‌ ವಿರುದ್ಧ ವಿಪಕ್ಷ ಮಾತ್ರವಲ್ಲದೆ, ಆಡಳಿತಾರೂಢ ಕಾಂಗ್ರೆಸ್‌ ಕೂಡ ಪರೋಕ್ಷ ಬೇಸರ ವ್ಯಕ್ತಪಡಿಸಿದ್ದು, ಸಮಯದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next