ಮಂಗಳೂರು: ಕರಾವಳಿಯಲ್ಲಿ ಸಿಗಡಿ, ಮೀನು ಬೆಳೆಯುತ್ತಿರುವವರಿಗೆ ಕೇಂದ್ರ ಸರಕಾರದ ಈ ಬಾರಿಯ ಬಜೆಟ್‌ನಲ್ಲಿ ಸಿಹಿಸುದ್ದಿ ದೊರಕಿದೆ. ಸಿಗಡಿಗಳಿಗೆ ಹಾಕುವ ಆಹಾರದ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 15ರಿಂದ ಶೇ 5ಕ್ಕೆ ಇಳಿಸಲಾಗಿದೆ.
ಅಲ್ಲದೆ ಸಿಗಡಿ ಹಾಗೂ ಮೀನು ಆಹಾರ ಉತ್ಪಾದಿಸುವ ಘಟಕಗಳಿಗೆ ಬೇಕಾಗುವ ವಿಟಮಿನ್ ಮಿಕ್ಸ್‌ಗಳು, ಕ್ರಿಲ್ ಮೀಲ್, ಫಿಶ್ ಲಿಪಿಡ್ ತೈಲ, ಕಚ್ಚಾ ಮೀನು ತೈಲ, ಆಲ್ಗಲ್ ಪ್ರ„ಮ್, ಆಲ್ಗಲ್ ತೈಲಗಳ ಮೇಲಿನ ಶೇ.30, ಶೇ.15, ಶೇ5ರಷ್ಟಿದ್ದ ಸುಂಕವನ್ನು ಈ ಬಾರಿ ಪೂರ್ತಿಯಾಗಿ ತೆಗೆದು ಹಾಕಲಾಗಿದೆ.
ಕರಾವಳಿಗೆ ಸಂಬಂಧಿಸಿದಂತೆ ಕ್ರೂಸ್ ಪ್ರವಾಸೋದ್ಯಮದ ಮಹತ್ವವನ್ನು ಕೇಂದ್ರ ಸರಕಾರ ಪ್ರಚುರಪಡಿಸಲು ಮುಂದಾಗಿದೆ. ಇದೊಂದು ಉದ್ಯೋಗ ಸೃಷ್ಟಿಸುವ ಉದ್ದಿಮೆಯಾಗಿದ್ದು ದೇಶೀಯ ಕ್ರೂಸ್ ಹಡಗು ಆರಂಭಿಸುವ ವಿದೇಶಿ ಕ್ರೂಸ್ ಹಡಗು ಕಂಪೆನಿಗಳಿಗೆ ಸರಳೀಕೃತ ತೆರಿಗೆ ಪದ್ಧತಿ ರೂಪಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.
ಸಂಸ್ಕರಿತ ಅಡಿಕೆಗೆ ಸುರಕ್ಷತೆ
ಈ ಬಾರಿಯ ಬಜೆಟ್‌ನಲ್ಲಿ ಹುರಿದ (ರೋಸ್ಟೆಡ್) ಹಾಗೂ ಸಿದ್ಧಪಡಿಸಿದ (ಪ್ರಿಪೇರ್ಡ್) ಅಡಿಕೆಗಳಿಗೆ ಇರುವ ಮೂಲ ಕಸ್ಟಮ್ಸ್ ಸುಂಕವನ್ನು ಶೇ.30ರಿಂದ ಶೇ.150ಕ್ಕೆ ಏರಿಸಲಾಗಿದೆ(01-10-2024ರಿಂದ ಅನ್ವಯ). ಆದರೆ ಆಮದು ದರ (ಶೇ.30)ರಲ್ಲೇ ಸದ್ಯ ಇರಲಿದ್ದು, ಮುಂದೆ ಕಸ್ಟಮ್ಸ್ ಸುಂಕ ಏರಿಕೆಗೆ ಅವಕಾಶವನ್ನು ಇಟ್ಟುಕೊಳ್ಳಲಾಗಿದೆ. ಇದರಿಂದ ಸರಕಾರಕ್ಕೆ ಅಗತ್ಯ ಬಿದ್ದರೆ ಈ ಅಡಿಕೆ ವಿಭಾಗಗಳಲ್ಲೂ ಆಮದು ದರವನ್ನು ಏರಿಸುವುದಕ್ಕೆ ಅವಕಾಶವಿದ್ದು, ದೇಶೀಯ ಮೌಲ್ಯವರ್ಧಿತ ಅಡಿಕೆ ಮಾರಾಟಗಾರರನ್ನು ರಕ್ಷಿಸಬಹುದಾಗಿದೆ.