Advertisement

ಕಾರು ಆಮದು ಮಾಡಿಕೊಂಡರೆ ದುಬಾರಿ, ಸಿಗರೇಟು ಸೇದುವವರಿಗೂ ಬಿಸಿ ಹೆಚ್ಚಳ

09:06 PM Feb 01, 2023 | Team Udayavani |

ನಿರ್ಮಲಾ ಸೀತಾರಾಮನ್‌ ಪರೋಕ್ಷ ತೆರಿಗೆಗಳಲ್ಲಿ ಬಹಳ ಬದಲಾವಣೆ ಮಾಡಿದ್ದಾರೆ. ಯಾವುದನ್ನು ಏರಿಸುವುದರಿಂದ ದೇಶಕ್ಕೆ ಲಾಭವಾಗುತ್ತದೆ, ಯಾವುದನ್ನು ಇಳಿಸುವುದರಿಂದ ನಷ್ಟವಾಗುತ್ತದೆ ಎಂಬುದನ್ನು ಅಳೆದುತೂಗಿ ಸರಕು, ಸೇವೆಗಳ ಮೇಲೆ ಹಲವು ತೆರಿಗೆ ಬದಲಾವಣೆಗಳನ್ನು ಮಾಡಿದ್ದಾರೆ. ಇದರ ಪರಿಣಾಮ ದೇಶೀಯವಾಗಿ ಉತ್ಪಾದನೆಯಾಗುವ ಮೊಬೈಲ್‌ಗ‌ಳು, ಟೀವಿಗಳ ಬೆಲೆ ಇಳಿಯಲಿದೆ. ಆದರೆ ಆಮದು ಕಾರುಗಳು, ವಿದ್ಯುತ್‌ಚಾಲಿತಗಳ ವಾಹನಗಳ ಬೆಲೆಯೇರಲಿದೆ.

Advertisement

ಮಾತ್ರವಲ್ಲ ಬಿಡಿಭಾಗಗಳನ್ನು ಭಾರತಕ್ಕೆ ತಂದು ಜೋಡಿಸಿದ ವಾಹನಗಳ ಬೆಲೆಯೂ ಏರಲಿದೆ. ಹಾಗೆಯೇ ಸಿಗರೇಟು ಸೇದುವ ಅಭ್ಯಾಸವಿರುವವರು ಸ್ವಲ್ಪ ತಲೆಬಿಸಿಗೆ ಸಿಕ್ಕಿದ್ದಾರೆ. ಸಿಗರೇಟುಗಳ ಮೇಲಿನ ಬೆಲೆಯೂ ಏರಲಿದೆ. ಕೆಲ ನಿರ್ದಿಷ್ಟ ಸಿಗರೇಟ್‌ಗಳ ಮೇಲೆ ರಾಷ್ಟ್ರೀಯ ವಿಪತ್ತು ದಳ ಸುಂಕದಡಿ (ಎನ್‌ಸಿಸಿಡಿ) ತೆರಿಗೆ ಪ್ರಮಾಣವನ್ನು ಶೇ.16ಕ್ಕೇರಿಸಲಾಗಿದೆ. ಈ ಸುಂಕ 3 ವರ್ಷಗಳ ಹಿಂದೆ ಏರಿಕೆಯಾಗಿತ್ತು. ಇದೀಗ ಮತ್ತೆ ಏರಿರುವುದರಿಂದ ಸಿಗರೇಟುಗಳು ಬೆರಳುಗಳನ್ನು ಇನ್ನಷ್ಟು ಬಿಸಿ ಮಾಡುತ್ತವೆ!

ದೇಸೀ ನಿರ್ಮಿತ ಟೀವಿ, ಮೊಬೈಲ್‌ಗ‌ಳು ಅಗ್ಗ: ದೇಶೀಯವಾಗಿ ತಯಾರಿಸಲ್ಪಡುವ ಟೀವಿಗಳು, ಮೊಬೈಲ್‌ಗ‌ಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಿರ್ದಿಷ್ಟ ತೆರಿಗೆಗಳನ್ನು ಇಳಿಸಲಾಗಿದೆ. ಟೀವಿ ಪ್ಯಾನೆಲ್‌ಗ‌ಳ ಸೆಲ್‌ಗ‌ಳನ್ನು ತಯಾರಿಸಲು ಬೇಕಾದ ಬಿಡಿಭಾಗಗಳ ಆಮದಿನ ಮೇಲಿನ ಸೀಮಾಸುಂಕವನ್ನು ಶೇ.5ರಿಂದ ಶೇ.2.5ಕ್ಕೆ ಇಳಿಸಲಾಗಿದೆ. ಇದರಿಂದ ದೇಶೀಯ ಟೀವಿಗಳ ಬೆಲೆಯಿಳಿಕೆಯಾಗಲಿದೆ. ಹಾಗೆಯೇ ಮೊಬೈಲ್‌ಗ‌ಳಲ್ಲಿ ಬಳಸುವ ಕ್ಯಾಮೆರಾ ಲೆನ್ಸ್‌ಗಳು, ಕ್ಯಾಮೆರಾ ಮಾಡ್ನೂಲ್‌ಗ‌ಳನ್ನು ತಯಾರಿಸಲು ಬೇಕಾದ ಬಿಡಿಭಾಗಗಳ ಸೀಮಾಸುಂಕದಿಂದ ವಿನಾಯ್ತಿ ನೀಡಲಾಗಿದೆ.

ಹಿಂದೆ ಈ ತೆರಿಗೆ ಪ್ರಮಾಣ ಶೇ.2.5ರಷ್ಟಿತ್ತು. ಆಮದು ವಾಹನಗಳು ದುಬಾರಿ: ಸಿದ್ಧರೂಪದ ಕಾರುಗಳ (ವಿದ್ಯುತ್‌ ಚಾಲಿತ ವಾಹನಗಳೂ ಸೇರಿ) ಆಮದು ದುಬಾರಿಯಾಗಲಿದೆ. ಬಿಡಿಭಾಗಗಳನ್ನು ಭಾರತಕ್ಕೆ ತರಿಸಿಕೊಂಡು ಸಿದ್ಧಪಡಿಸಿದರೂ ಪರಿಸ್ಥಿತಿ ಅಷ್ಟೇ! ಇದಕ್ಕೆ ಕಾರಣ ಸೀಮಾಸುಂಕ ಏರಿಕೆ.

ಸಿದ್ಧರೂಪದ ವಾಹನಗಳ ಆಮದಿನ ಮೇಲಿನ ಸೀಮಾಸುಂಕವನ್ನು ಶೇ.60ರಿಂದ ಶೇ.70ಕ್ಕೇರಿಸಲಾಗಿದೆ. 40,000 ಡಾಲರ್‌ಗಳಿಗಿಂತ ಕಡಿಮೆ ಮೌಲ್ಯದ ಅಥವಾ ಎಂಜಿನ್‌ ಸಾಮರ್ಥ್ಯ 3000 ಸಿಸಿಗಿಂತ ಕಡಿಮೆಯಿರುವ ಪೆಟ್ರೋಲ್‌ ವಾಹನಗಳು ಹಾಗೂ ಡೀಸೆಲ್‌ನಿಂದ ಚಾಲಿತಗೊಳ್ಳುವ, 2500 ಸಿಸಿಗಿಂತ ಕಡಿಮೆ ಸಾಮರ್ಥ್ಯದ ವಾಹನಗಳಿಗೆ ಈ ಏರಿಕೆ ಅನ್ವಯವಾಗುತ್ತದೆ. ಇನ್ನು ವಿದ್ಯುತ್‌ಚಾಲಿತ ವಾಹನಗಳ ಆಮದು ತೆರಿಗೆಯೂ ಶೇ.60ರಿಂದ 70ಕ್ಕೇರಿದೆ.

Advertisement

ಆಮದು ಸೈಕಲ್‌, ಆಟಿಕೆಗಳ ಬೆಲೆಯೂ ಹೆಚ್ಚಳ: ಆಮದಾದ ಸೈಕಲ್‌ಗ‌ಳ ಬೆಲೆಯೂ ಏರಲಿದೆ. ಇವುಗಳ ಮೇಲಿನ ಸೀಮಾಸುಂಕ ಶೇ.30ರಿಂದ 35ಕ್ಕೇರಲಿದೆ. ಜೊತೆಗೆ ಆಟಿಕೆಗಳು, ಅವುಗಳ ಬಿಡಿಭಾಗಗಳ ಆಮದಿನ ಮೇಲಿನ ತೆರಿಗೆಯನ್ನು ಶೇ.60ರಿಂದ ಶೇ.70ಕ್ಕೇರಿಸಲಾಗಿದೆ.

ಬೆಳ್ಳಿ ಬೆಲೆ ಏರಿಕೆ: ಬೆಳ್ಳಿಯ ಬಾರ್‌ಗಳ ಮೇಲೆ ಕೃಷಿ ಮೂಲಸೌಕರ್ಯಗಳ ಸೆಸ್‌ ಅನ್ನು ಶೇ.2.5ರಿಂದ 5ಕ್ಕೇರಿಸಲಾಗಿದೆ. ಬೆಳ್ಳಿಲೇಪಿತ ಬಾರ್‌ಗಳ ಮೇಲಿನ ಸೆಸ್‌ ಅನ್ನು ಶೇ.2.5ರಿಂದ 4.35ಕ್ಕೇರಿಸಲಾಗಿದೆ. ಇದರಿಂದ ಬೆಳ್ಳಿ ಬೆಲೆಯೂ ಏರಲಿದೆ.

ಪಾಯಿಂಟ್‌ಗಳು
-ಹಲವು ವಸ್ತುಗಳ ಮೇಲೆ ಸೀಮಾಸುಂಕ ಹೆಚ್ಚಳ, ದೇಶೀಯ ಉತ್ಪಾದನೆ, ರಫ್ತು ಹೆಚ್ಚಿಸುವುದೇ ಉದ್ದೇಶ.
-ಲಿಥಿಯಮ್‌ ಐಯಾನ್‌ ಸೆಲ್ಸ್‌ ಸಿದ್ಧಪಡಿಸುವ ಸರಕುಗಳ ಮೇಲೆ ತೆರಿಗೆ ಇಳಿಕೆ. ಇದರಿಂದ ವಿದ್ಯುತ್‌ ಚಾಲಿತ ವಾಹನಗಳು, ಮೊಬೈಲ್‌ಗ‌ಳ ಉತ್ಪಾದನೆಗೆ ಸಹಕಾರಿ.
-ದೇಶೀಯ ಫ್ಲೋರೊ ಕೆಮಿಕಲ್ಸ್‌ ಉದ್ಯಮವನ್ನು ಸ್ಪರ್ಧಾತ್ಮಕಗೊಳಿಸಲು ಆ್ಯಸಿಡ್‌ ದರ್ಜೆಯ ಫ್ಲೋರ್‌ಸ್ಪಾರ್‌ ಸೀಮಾಸುಂಕವನ್ನು ಶೇ.5ರಿಂದ ಶೇ.2.5ಕ್ಕಿಳಿಸಲಾಗಿದೆ. ಎಪಿಕೊಲಾರ್‌ಹೈಡ್ರಿನ್‌ ತಯಾರಿಕೆಗೆ ನೆರವಾಗಲು ಕಚ್ಚಾ ಗ್ಲಿಸರಿನ್‌ ಮೇಲಿನ ತೆರಿಗೆಯನ್ನೂ ಶೇ.7.5ರಿಂದ 2.5ಕ್ಕಿಳಿಸಲಾಗಿದೆ.
-ಕ್ರೀಡಾಪಟುಗಳು ಮಧ್ಯಮ ತೂಕದ ಕುದುರೆಗಳ ಆಮದು ಮಾಡಿಕೊಳ್ಳಲು ನೆರವು ನೀಡಲಾಗಿದೆ. ಕ್ರೀಡಾಳುಗಳು ಈ ಕುದುರೆಗಳ ಆಮದಿಗೆ ಪಾವತಿಸಬೇಕಿದ್ದ ಶೇ.30 ಸೀಮಾಸುಂಕದಿಂದ ವಿನಾಯ್ತಿ ನೀಡಲಾಗಿದೆ.

ಪರೋಕ್ಷ ತೆರಿಗೆ ಎಂದರೆ?
ಆದಾಯ, ಲಾಭದ ಮೇಲೆ ತೆರಿಗೆ ವಿಧಿಸುವುದು ನೇರ ತೆರಿಗೆ. ಅದೇ ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ಹಾಕುವುದನ್ನು ಪರೋಕ್ಷ ತೆರಿಗೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next