ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ(ಫೆ-02) 2022-23ನೇ ಸಾಲಿನ ಬಜೆಟ್ ಮಂಡನೆ ವೇಳೆ, ರೈಲ್ವೆ ಬಜೆಟ್ ಅನ್ನು ಮಂಡಿಸಿದರು. 2017ರಲ್ಲಿ ಸಾಮಾನ್ಯ ಬಜೆಟ್ ನಲ್ಲಿ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಲಾಗಿತ್ತು.
ಇದನ್ನೂ ಓದಿ:ಮಧ್ಯಮ ವರ್ಗಕ್ಕೆ ಏನಿಲ್ಲ..: ಕೇಂದ್ರದ ಬಜೆಟ್ ಗೆ ನೆಟ್ಟಿಗರ ಪ್ರತಿಕ್ರಿಯೆ
ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್ ಜೊತೆ ವಿಲೀನಗೊಂಡ ಬಳಿಕ ಮಂಡನೆಯಾದ 6ನೇ ಬಜೆಟ್ ಆಗಿದೆ. ಪ್ರಸಕ್ತ ಸಾಲಿನ ರೈಲ್ವೆ ಬಜೆಟ್ ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 400 ವಂದೇ ಭಾರತ್ ಅತ್ಯಾಧುನಿಕ ರೈಲುಗಳು ಸಂಚರಿಸಲಿದೆ ಎಂದು ಘೋಷಿಸಿದ್ದಾರೆ.
ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲ್ಯಾನ್ ಯೋಜನೆಯಡಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 100 ಕಾರ್ಗೋ (ಸರಕು) ಟರ್ಮಿನಲ್ಸ್ ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಿದೆ.
ಶೀಘ್ರವಾಗಿ ಭಾರತೀಯ ರೈಲ್ವೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ 24,000 ಕಿಲೋ ಮೀಟರ್ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಅಲ್ಲದೇ ಇನ್ನೂ 7,000 ಕಿಲೋ ಮೀಟರ್ ರೈಲ್ವೆ ಟ್ರ್ಯಾಕ್ ಅನ್ನು ವಿದ್ಯುದ್ದೀಕರಣ ಮಾಡುವುದಾಗಿ ಬಜೆಟ್ ನಲ್ಲಿ ಪ್ರಸ್ತಾಪಿಸಿದೆ.
2022-23ನೇ ಸಾಲಿನ ರೈಲ್ವೆ ಬಜೆಟ್ ನಲ್ಲಿ ರೈಲ್ವೆ ಹಳಿಗಳ ವಿದ್ಯುದ್ದೀಕರಣಕ್ಕಾಗಿ ಕೇಂದ್ರ ಸರ್ಕಾರ 10,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರಲ್ಲಿ ಬ್ರಾಡ್ ಗೇಜ್ ರೈಲ್ವೆ ಹಳಿಗಳನ್ನು ವಿದ್ಯುದ್ದೀಕರಣಗೊಳಿಸುವ ಯೋಜನೆಗೆ 7,452 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ.
ಭಾರತೀಯ ರೈಲ್ವೆ 2030ರೊಳಗೆ ಶೇ.100ರಷ್ಟು ಹಸಿರು ರೈಲ್ವೆ ವ್ಯವಸ್ಥೆಯ ಯೋಜನೆಯನ್ನು ಈ ಮೊದಲು ಪ್ರಸ್ತಾಪಿಸಿತ್ತು. ಈ ಹಿನ್ನೆಲೆಯಲ್ಲಿ 2023ರ ಡಿಸೆಂಬರ್ ನೊಳಗೆ ರೈಲ್ವೆಯ ಎಲ್ಲಾ ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸುವ ಗುರಿ ಹೊಂದಿದೆ.