ಚಿಂಚೋಳಿ: ವೀರಶೈವ ಜಂಗಮರು ದಲಿತ ಶೋಷಿತ ಅಸ್ಪೃಶ್ಯ ಅಲೆಮಾರಿ ಬೇಡ ಬುಡ್ಗ ಜಂಗಮರ ಮೀಸಲಾತಿ ಕಬಳಿಸುತ್ತಿರುವುದನ್ನು ಖಂಡಿಸಿ ಹೈದ್ರಾಬಾದ ಕರ್ನಾಟಕ ಅಲೆಮಾರಿ(ಪರಿಶಿಷ್ಟ ಜಾತಿ) ಬುಡ್ಗ ಜಂಗಮ ಜಾಗೃತಿ ಸೇವಾ ಸಂಘದ ಮುಖಂಡರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಗೌರವಾಧ್ಯಕ್ಷ ಡಾ| ಅಂಜನಯ್ಯ ಮಾತನಾಡಿ, ಪರಿಶಿಷ್ಟ ಜಾತಿ 19ನೇ ಕಲಂನಡಿ ಬುಡ್ಗ ಜಂಗಮ, ಬೇಡ ಜಂಗಮ ಒಂದೇ ಜಾತಿಯಲ್ಲಿ ಇರುವುದರಿಂದ ವೀರಶೈವ ಜಂಗಮರು ನಾವೇ ಬುಡ್ಗ ಜಂಗಮ ಪರಿಶಿಷ್ಟ ಜಾತಿಯವರು ಎಂದು ಪ್ರತಿಭಟನೆ ಮಾಡಿ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ಕೇಳಿದ್ದಾರೆ. ವೀರಶೈವ ಜಂಗಮರು ಪಂಚಪೀಠ ಪರಂಪರೆಗೆ ಸೇರಿದವರಾಗಿದ್ದಾರೆ. ಆದರೆ ಸರ್ಕಾರದ ದಾರಿ ತಪ್ಪಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವ ತಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬುಡ್ಗಜಂಗಮ ಜನಾಂಗವು ಪರಿಶಿಷ್ಟ ಜಾತಿಯಲ್ಲಿದ್ದು, ಅಲೆಮಾರಿಗಳಾಗಿದ್ದೇವೆ. ಮಾಂಸಹಾರಿಗಳಾಗಿದ್ದು, ಗುಡ್ಡಗಾಡುಗಳಲ್ಲಿ ಗುಡಿಸಲುಗಳಲ್ಲಿ ವಾಸಿಸುವವರಾಗಿದ್ದಾರೆ. ಒಂದೇ ಕಡೆ ನೆಲೆ ನಿಲ್ಲದೇ ಹಗಲುವೇಷ, ಬುರ್ರಕಥಾ, ಗಂಗಿಗೌರಿ ಕೀರ್ತನ ಕಾವ್ಯಗಳನ್ನು ಹೇಳುತ್ತಾ ಅನೇಕ ವೇಷಗಳನ್ನು ಧರಿಸಿ ಜನರಿಗೆ ಜಾತಿಗೊಂದು ಕಥೆ ಹೇಳುವ ನಮ್ಮ ಸಮಾಜಕ್ಕೆ ನೀಡುವ ಮೀಸಲಾತಿ ದೋಚುವ ಪ್ರಯತ್ನ ನಡೆಯುತ್ತಿದೆ. ಸರ್ಕಾರ ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ರಮೇಶ ಯಾಕಾಪುರ, ತಾಲೂಕು ಬುಡ್ಗಜಂಗಮ ಸಮಾಜದ ಅಧ್ಯಕ್ಷ ರಂಗಯ್ಯ, ಯಲ್ಲಪ್ಪ, ಕಿಷ್ಟಯ್ಯ, ಶಂಕರ, ಅರ್ಜುನ, ಸಾಯಿಕೃಷ್ಣ, ರಾಮುಲು ಕಲ್ಲೂರ, ಪೆಂಟಯ್ಯ, ರಮೇಶ ವಂಟಿಚಿಂತಾ ಮಾತನಾಡಿದರು.
ಮುಖಂಡರಾದ ರಾಜು ಬೆಡಕಪಳ್ಳಿ, ಗೌತಮ ಬೊಮ್ಮನಳ್ಳಿ, ಆರ್. ಗಣಪತರಾವ್, ಗೋಪಾಲ ರಾಂಪೂರೆ, ಅಮರ ಲೊಡನೋರ, ಕಾಶಿನಾಥ ಸಿಂಧೆ, ಸುನೀಲ ದೊಡ್ಡಮನಿ, ಅನಿಲ ಕಟ್ಟಿ ಇನ್ನಿತರರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಲಾಯಿತು.