Advertisement
ಗುರು ದೇಹ ಬಿಡುವಾಗ ನಡೆಯುವ ಚಮತ್ಕಾರಗಳಲ್ಲಿ ಇದು ಒಂದು. ದೇಹ ಬಿಡುವುದು ನೇರ ಪ್ರಾಣಪಕ್ಷಿ ಹಾರಿಹೋಗುವುದು ಇರಬಹುದು, ಇಲ್ಲವೇ ಹಳೆಯ ಪೊರೆ ಕಳಚಿ ಶಿಷ್ಯ-ಜಿಜ್ಞಾಸುವೇ ಗುರುವಾಗಿ ಹೊಮ್ಮುವುದೂ ಇರಬಹುದು, ಒಟ್ಟಿನಲ್ಲಿ ಹಳೆಯ ಗೆದ್ದಲು ಕಟ್ಟಿದ ಮನೆ ಬೀಳಿಸಿ ಅಲ್ಲಿ ಬಯಲು ನಿರ್ಮಿಸುವುದೇ ಗುರು ತತ್ವ. ಜೈನ ಮಹಾವೀರರು ಹೀಗೆ ಪರಮ ಅರಿವು ಅಂದರೆ ಕೈವಲ್ಯ ಜ್ಞಾನ ಪಡೆದಾಗ ಅವರಿಂದಲೂ ಬೋಧೆ ಚಿಮ್ಮಿತ್ತು. ಬುದ್ಧನ ಈ ಪ್ರಕರಣದಲ್ಲಿ ಅದು ಗೃಧ್ರಕೂಟವಾದರೆ, ಅಲ್ಲಿ ಆ ಜಾಗಕ್ಕೆ ಸಮವಸರಣ ಮಂಟಪ ಎಂದು ಹೆಸರು. ಗುರು ಮೌನವಾಗಿ ಕುಳಿತಿರುತ್ತಾನೆ. ಅವನ ಘನ ಮೌನದಿಂದ, ಪ್ರಗಾಧ ಮೌನದಿಂದ ಅರಿವಿನ ತರಂಗಗಳು ಹೊಮ್ಮುತ್ತಿರುತ್ತವೆ, ಅದನ್ನು ಅರಿವು ಪಡೆಯಲು ಆಗ ಯೋಗ್ಯತೆ ಹೊಂದಿವರಿಗೆ ಅಲ್ಲÇÉೇ ಅರಿವಾಗುತ್ತಿರುತ್ತದೆ. ಇದಕ್ಕೆ ಸಂಬಂಧಿಸಿದ ಒಂದು ಹಳೆಯ ಕತೆಯಿದೆ, ಹಿಂದೆ ಗುರುವನ್ನು ನೋಡಿ ಅರಿವು ಪಡೆಯಲು ಶಿಷ್ಯ ಹೋದ, ಒಂದಲ್ಲ ಮೂರು ಬಾರಿ ಹೋದ, “ನೀನು ದೊಡ್ಡ ಗುರುವಂತೆ, ನನಗೆ ಇಂಥ ಒಂದು ಸಂದೇಹವಿದೆ, ಅದನ್ನು ಪರಿಹರಿಸು’ ಎಂದು ಮೂರು ಸಲ ಬೇರೆ ಬೇರೆ ಸಲ ಕೇಳಿಕೊಂಡ. ಗುರು ಎರಡೂ ಸಲ ಸುಮ್ಮನಿದ್ದ. “ಮೂರನೆಯ ಸಲ ಕೂಡ ನೀನು ಹೇಳಿಕೊಡಲೇ ಇಲ್ಲ’ ಎಂದು ಬಿಟ್ಟ ಶಿಷ್ಯ. ಅದಕ್ಕೆ ಗುರು ನಿಧಾನ ಸ್ವರದಲ್ಲಿ, “ಎಷ್ಟು ಸಲ ಹೇಳುವುದು, ಆಗಲೇ ಮೂರು ಸಲ ಹೇಳಿದೆನಲ್ಲ !’ ಎಂಬ ಅಚ್ಚರಿಪಟ್ಟನಂತೆ.
Related Articles
Advertisement
ಈ ಕಾರಣದಿಂದ ಬೌದ್ಧರಲ್ಲಿ ತಂತ್ರಗಳು ಉಂಟು ಎಂದು ಹೇಳಲಾಗುತ್ತದೆ. ವಿಶ್ವದಲ್ಲಿ ಇರುವ ಅಪಾರ ಪ್ರಮಾಣದ ದುಃಖವನ್ನು ನಾಶಮಾಡಬೇಕಷ್ಟೆ. ಇದು ಬೋಧಿಸತ್ವರ ಕಾರ್ಯ, ಇಲ್ಲಿ ಒಂದು ಪ್ರಶ್ನೆ ಬರುತ್ತದೆ, ಈ ಬೋಧಿಸತ್ವರಿಗೆ ಲೋಕದ ಶೋಕನಾಶ ಮಾಡಲು ಪ್ರೇರಣೆ ಕೊಡುವವರು ಯಾರು ಅಥವಾ ಅಂಥ ಪ್ರೇರಣೆ ಎಲ್ಲಿಂದ ಬರುತ್ತದೆ? ಇದಕ್ಕೆ ಉತ್ತರ ಪ್ರಜ್ಞಾಪಾರಮಿತ ಜನನಿಯಿಂದ ಬರುತ್ತದೆ. ಈ ಜನನಿಯ ಪ್ರೇರಣೆ ಮತ್ತು ಸಾಮರ್ಥ್ಯದಿಂದ ಬೋಧಿಸತ್ವರು ಪ್ರಪಂಚದ ನೋವಿನ ನಿವಾರಣೆಗೆ ಪ್ರೇರಣೆ ಹೊಂದುತ್ತಾರೆ, ತಂತ್ರ ಅದೆಷ್ಟು ಅಹಿಂಸಾತ್ಮಕ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?
ತಂತ್ರದ ಕುರಿತು ಬೌದ್ಧ ಸಂಪ್ರದಾಯಕ್ಕೆ ಹಲವು ನೆನಪುಗಳು ಉಂಟು. ಮಹಾಯಾನ ಮತ್ತು ಬೌದ್ಧತಂತ್ರ ಅಥವಾ ಮಂತ್ರಯಾನ ಅನೇಕ ಸಮಾನ ಸಂಗತಿಗಳನ್ನು ಹಂಚಿಕೊಂಡಿವೆ. ಅಧ್ಯಾತ್ಮ ಸಾಧನೆಗೆ ಎರಡರಲ್ಲೂ ಪಾಲಿದೆ. ಮಾಧ್ಯಮಿಕಾ ದರ್ಶನ ಮತ್ತು ಇನ್ನೊಂದು ಬೌದ್ಧ ದರ್ಶನವೇ ಆದ ಯೋಗಾಚಾರ ದರ್ಶನಗಳಿಗೆ ಪಾರಮಿತಾ ಮಾರ್ಗದೊಡನೆ ಸಮ್ಮತಿ ಇದೆ. ಅಂದರೆ ಅವು ಮಂತ್ರ-ತಂತ್ರ ಒಪ್ಪಿವೆ. ದಕ್ಷಿಣಭಾರತದ ಆಂಧ್ರಪ್ರದೇಶದಲ್ಲಿ ಅಮರಾವತಿಯ ಬಳಿ ಶ್ರೀಧ್ಯಾನ ಕಟಕ ಎಂಬ ಪ್ರದೇಶವಿದೆ, ಇದು ಬೌದ್ಧ ತಂತ್ರಗಳ ಕೇಂದ್ರ. ಅಲ್ಲಮ, ಅಕ್ಕಮಹಾದೇವಿಯರ ಜೀವನದಲ್ಲಿ ಪಾತ್ರಪಡೆದಿರುವ ಶ್ರೀಶೈಲವೂ ಒಂದು ತಾಂತ್ರಿಕಪೀಠ. ಇದು ಶೈವ ಮತ್ತು ಬೌದ್ಧ ಸಂಪ್ರದಾಯಗಳ ತಾಂತ್ರಿಕ ಸಾಧಕರು ಸಾಧನೆ ಮಾಡಿದ ಸ್ಥಳ. ಶಿವನ ಹನ್ನೆರಡು ಜ್ಯೋತಿರ್ಲಿಂಗಳ ಪೈಕಿ ಒಂದು ಶಿವಲಿಂಗ ಇಲ್ಲಿದೆ.
ಮತ್ತೆ ಮೂರು ಯಾನಗಳುಒಟ್ಟಿನಲ್ಲಿ ಬೌದ್ಧರ ತಂತ್ರ ಮಾರ್ಗವು ಮಂತ್ರಯಾನ. ಅದು ಯೋಗಾಚಾರ ಮತ್ತು ಮಾಧ್ಯಮಿಕ ದರ್ಶನ ಎರಡನ್ನೂ ಪ್ರಭಾವಿಸಿದೆ. ಅದರಲ್ಲಿ ಕೆಲವು ಒಳಭೇದಗಳಿವೆ. ಅವುಗಳೆಂದರೆ- ವಜ್ರಯಾನ, ಕಾಲಚಕ್ರಯಾನ ಮತ್ತು ಸಹಜಯಾನ. ಮಂತ್ರ ಎಂಬುದು ಕಣ್ಣಿಗೆ ಕಾಣಿಸುವುದಿಲ್ಲ, ಆದರೆ ಅದೇ ಒಂದು ದೊಡ್ಡ ಲೋಕ. ನೀವು ಒಂದು ಮೂಲೆಯಲ್ಲಿ ತಣ್ಣಗೆ ಕುಳಿತು ಯಾವುದಾದರೂ ಒಂದು ದೇವರ ಹೆಸರನ್ನೋ ಅಥವಾ ಓಂಕಾರವನ್ನೋ 1008 ಸಲ ಹೇಳಿ ನೋಡಿ, ಆಗ ನಿಮ್ಮ ದೇಹದಲ್ಲಿ ಆಗುವ ಕಂಪನಗಳನ್ನು ಗಮನಿಸಿ. ಯಾರೂ ಹೀಗೆ ಮಾಡು ಎಂದು ನಿರ್ದಿಷ್ಟ ಉಪದೇಶ ಮಾಡದೆ ನೀವು ಸುಮ್ಮನೆ ಪ್ರಯೋಗ ಮಾಡಿದರೆ ಎಷ್ಟೊಂದು ಶಕ್ತಿ ನಿಮ್ಮಲ್ಲಿದೆ, ಈ ನಿಸರ್ಗದಲ್ಲಿದೆ ಎಂಬುದು ಗೊತ್ತಾಗುತ್ತದೆ. ಮನುಷ್ಯರ ಮಾಮೂಲಿ ಮಾತು ಮತ್ತು ಕಾವ್ಯಗಳ ಮಾತಿಗೆ ಒಂದು ಅರ್ಥವಿದೆ. ಆದರೆ, ಸಂಗೀತದ ನಾದಕ್ಕೆ, ಮಂತ್ರಗಳಲ್ಲಿ ಬಳಸುವ ಶಬ್ದಕ್ಕೆ ಅಂಥ ಯಾವ ಅರ್ಥಗಳೂ ಇರುವುದಿಲ್ಲ. ಆದರೆ ಅರ್ಥವಂತಿಕೆ ಇರುತ್ತದೆ. ಮೀನಿಂಗ್ ಇಲ್ಲ, ಮೀನಿಂಗ್‌ಫುಲ್ ಅನಿಸುತ್ತದೆ! ಇದಕ್ಕೆ ಕಾರಣ ಏನನ್ನೋ ತರ್ಕದ, ಸಂಧಿಸಮಾಸದ ಭಾಷೆಯಲ್ಲಿ ವಿವರಿಸಲು ತಂತ್ರ-ಮಂತ್ರವಿದ್ಯೆ ಹೆಣಗುವುದೇ ಇಲ್ಲ, ಅದು ಅರ್ಥಲೋಕ ಮೀರಿದ ಒಂದು ಆದ್ರìಲೋಕಕ್ಕೆ ಮನುಷ್ಯರನ್ನು ಕರೆದುಕೊಂಡು ಹೋಗುತ್ತದೆ. ಸಂಗೀತ ಅದರಲ್ಲೂ ಘನವಾದ ಸಂಗೀತ ಕೇಳುವಾಗ ತಾಯಿ ರಚ್ಚೆ ಹಿಡಿದ ಮಗುವನ್ನು ಸಂತೈಸುವಂತೆ ಇರುತ್ತದೆ. ತರ್ಕಭಾಷೆಯಲ್ಲಿ ಬಂಧಿತ ಮನುಷ್ಯನ ಸಂದಿಗ್ಧಗಳು ಕಳಚಲು ಅಸಂಧಿಗ್ಧವಾದ ಮಂತ್ರವೇ ಬೇಕು ಅಥವಾ ನಾದವೇ ಬೇಕು. ಹೀಗಾಗಿ ನಾದಲೋಕ ಮತ್ತು ತಂತ್ರಲೋಕ ಎರಡಕ್ಕೂ ಮೂಲ ಅಡಿಪಾಯ ಒಂದೇ, ಅದು ಶಬ್ದಮುಗ್ಧ ಸ್ಥಿತಿ, ನಮ್ಮ ನರನಾಡಿಗಳಲ್ಲಿ ಇರುವ ಯಾವುದೋ ಸುರಸಂಗೀತದೊಡನೆ ಮಾಡುವ ಯಾನ. ವಜ್ರಯಾನವನ್ನು ಮಂತ್ರಯಾನ ಎಂದು ಹಿರಿಯಬೌದ್ಧರು ಕರೆದಿ¨ªಾರೆ. ಏಕೆಂದರೆ, ಗುರು ಉಪದೇಶಿಸುವ ಮಂತ್ರಕ್ಕೆ ಇಲ್ಲಿ ಪ್ರಾಶಸ್ತ್ಯ. ಕಾಲಚಕ್ರಯಾನದಲ್ಲೂ ಕೂಡ ಇದೇ ಆಗುವುದು. ಈ ಕಾಲ ಚಕ್ರಯಾನವನ್ನು ಗೌತಮಬುದ್ಧನಿಗೂ ಹಳಬನಾದ ದೀಪಂಕರನೆಂಬ ಬುದ್ಧ ಪ್ರವರ್ತನೆ ಮಾಡಿದ ಎನ್ನುತ್ತದೆ ಬೌದ್ಧರ ಸಂಪ್ರದಾಯ. ಮುಂದೆ ಅದು ಕೆಲವು ಕಾಲ ಜನರ ನೆನಪಿನಿಂದ ಮಾಸಿ ಹೋಗಿದ್ದೂ ನಿಜವೇ. ಏನೇ ಆದರೂ ಈ ಚಾರಿತ್ರಿಕ ಸಂಗತಿಗಳ ಆಚೆಗೂ ಈಗಲೂ ಪುಸ್ತಕ ಜ್ಞಾನ ಮೀರಿದ ಒಂದು ಬೌದ್ಧ ಸಾಧನಾ ಲೋಕವಿದೆ, ಅಲ್ಲಿ ತಂತ್ರಯಾನಕ್ಕೂ ಮಣೆ ಹಾಕಲಾಗಿದೆ ಎಂಬ ಸಂಗತಿ ನೆನಪಿಟ್ಟರೆ ಸಾಕು. – ಜಿ. ಬಿ. ಹರೀಶ