ಮುಂಬೈ: ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ವಿರುದ್ಧ ಕಾಂಗ್ರೆಸ್ ಮತ್ತೊಂದು ಸ್ವಹಿತಾಸಕ್ತಿ ಸಂಘರ್ಷದ ಆರೋಪ ಮಾಡಿದೆ. ಹಲವು ಪ್ರಕರಣಗಳಲ್ಲಿ ಸೆಬಿಯಿಂದ ತನಿಖೆ ಎದುರಿಸುತ್ತಿರುವ ಕಂಪನಿಯೊಂದಕ್ಕೆ ಸೇರಿದ ಸಂಸ್ಥೆಯಿಂದ ಮಾಧವಿ ಅವರು 2.16 ಕೋಟಿ ರೂ. ಬಾಡಿಗೆ ಆದಾಯ ಪಡೆದಿದ್ದಾರೆಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದಾರೆ. ಇದು ಕೇವಲ ಸ್ವಹಿತಾಸಕ್ತಿ ಸಂಘರ್ಷ ಅಷ್ಟೇ, ಸಂಪೂರ್ಣವಾಗಿ ಭ್ರಷ್ಟಾಚಾರ ಪ್ರಕರಣ ಎಂದಿದ್ದಾರೆ.
ಏನು ಆರೋಪ?
ಸೆಬಿಯಿಂದ ವಿಚಾರಣೆ ಎದುರಿಸುತ್ತಿರುವ ವೋಕಾರ್ಡ್ ಕಂಪನಿಯ ಅಂಗ ಸಂಸ್ಥೆ ಕಾರ್ಲೋ ಇನ್ಫೋ ಸರ್ವಿಸಸ್ಗೆ ಮಾಧವಿ ಅವರು 2018-19ರಲ್ಲಿ ಮುಂಬೈನಲ್ಲಿರುವ ತಮ್ಮ ಆಸ್ತಿಯನ್ನು ಬಾಡಿಗೆ ನೀಡಿದ್ದರು. ತಿಂಗಳಿಗೆ 7 ಲಕ್ಷ ರೂ. ಬಾಡಿಗೆ ನಿಗದಿಯಾಗಿತ್ತು. ಇದೇ ಅವಧಿಯಲ್ಲಿ ಮಾಧವಿ ಸೆಬಿಯ ಪೂರ್ಣಾವಧಿ ಸದಸ್ಯರಾಗಿದ್ದರು ಎಂದು ಖೇರಾ ಹೇಳಿದ್ದಾರೆ.
ಇನ್ಸೈಡರ್ ಟ್ರೇಡಿಂಗ್ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಸೆಬಿಯಿಂದ ವಿಚಾರಣೆ ಎದುರಿಸುತ್ತಿರುವ ವೋಕಾರ್ಡ್r ಹಾಗೂ ಕಾರ್ಲೋ ಇನ್ಫೋ ಸರ್ವಿಸಸ್ನ ಪ್ರವರ್ತಕರು ಒಬ್ಬರೇ ಆಗಿದ್ದಾರೆ ಎಂದು ಆರೋಪಿಸಿದರು.
ಸೆಬಿ ಮುಖ್ಯಸ್ಥೆ ಪ್ರಶ್ನಿಸಲು ಪಿಎಸಿ ನಿರ್ಧಾರ:
ಹಲವು ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಅವರನ್ನು ಕರೆಯಿಸಿ ವಿಚಾರಣೆ ನಡೆಸಲಾಗುವುದು ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.