ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರವೊಂದನ್ನು ಬರೆದಿದ್ದು, ಹೆಲಿಕ್ಯಾಪ್ಟರ್ ಪ್ರಯಾಣದ ಕುರಿತಾಗಿನ ಟೀಕೆಗೆ ತಿರುಗೇಟು ನೀಡಿದ್ದಾರೆ.
ಹೆಲಿಕ್ಯಾಪ್ಟರ್‌ನಲ್ಲಿ ಪ್ರಯಾಣಿಸಿ ದುಂದುವೆಚ್ಚ ಮಾಡಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಟೀಕೆಯ ಹಿನ್ನಲೆಯಲ್ಲಿ ಯಡಿಯೂರಪ್ಪ ಪತ್ರ ಬರೆದು ಖೇದ ವ್ಯಕ್ತಪಡಿಸಿ ಹೆಲಿಕ್ಯಾಪ್ಟರ್ ಬಳಸಿದ ಉದ್ದೇಶವನ್ನು ತಿಳಿಸಿದ್ದಾರೆ.
‘ಇಳಕಲ್ಲಿನ ಮಹಾಂತ ಶಿವಯೋಗಿಗಳಿಗೆ ಅಂತಿಮ ಗೌರವ ಸಲ್ಲಿಸಲು ಮೇ 21 ರಂದು ನಾನು ಹೆಲಿಕ್ಯಾಪ್ಟರ್‌ನಲ್ಲಿ ತೆರಳಿದ್ದೆ ,ಬಳಿಕ ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ತೆರಳಿದ್ದೆ.ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀ ಕಾಂತ್ ಅವರು ನನಗೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿದ್ದರು’ ಎಂದು ಬರೆದಿದ್ದಾರೆ.
‘ನೀವು ಈ ವಿಚಾರದಲ್ಲಿ ಹಗುರವಾಗಿ ಮಾತನಾಡಿರುವುದು ನನಗೆ ಅತ್ಯಂತ ಖೇದ ತಂದಿದೆ. ಸಮಯ ಸಂದರ್ಭ ತಿಳಿದುಕೊಳ್ಳದೆ ಧರ್ಮಗುರು ಮತ್ತು ರೈತನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ತೆರಳಿರುವುದನ್ನು ದುಂದುವೆಚ್ಚ ಎಂದಿರುವುದು ಸರಿಯೇ ? ಇದನ್ನು ಬಳಸಿಕೊಂಡು ಜನರಿಗೆ ತಪ್ಪು ಸಂದೇಶ ನೀಡಿದ್ದೀರಿ. ಇದು ನನಗೆ ನೋವುಂಟುಮಾಡಿದೆ’ ಎಂದು ಬರೆದಿದ್ದಾರೆ.
‘ನೀವು ಮುಖ್ಯಮಂತ್ರಿಯಾದ ಬಳಿಕ ಆಡಳಿತ ಯಂತ್ರ ನಿಂತು ಹೋಗಿದೆ.ಜನ ನಿಮ್ಮನ್ನು ಗಮನಿಸುತ್ತಿದ್ದಾರೆ. ನಿಮ್ಮ ಕುಚೋದ್ಯದ ಹೇಳಿಕೆಗಳನ್ನು ನಿಲ್ಲಿಸಿ .ಕೀಳು ಮಟ್ಟದ ಹೇಳಿಕೆಗಳನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ರೈತರ ಸಾಲ ಮನ್ನಾ ಮಾಡಿ ನಿಮ್ಮ ರಾಜಕೀಯ ನೈಪುಣ್ಯತೆ ಪ್ರದರ್ಶಿಸಿ’ ಎಂದು ಪತ್ರದಲ್ಲಿ ಬರೆದಿದ್ದಾರೆ.
ಟೀಕೆ ಮಾಡಲು ಹೇಳಿಲ್ಲ:ಎಚ್‌ಡಿಕೆ
ಸುದ್ದಿಗಾರರೊಂದಿಗೆ ಪತ್ರದ ಕುರಿತಾಗಿ ಮಾತನಾಡಿ ‘ಪತ್ರ ನನಗಿನ್ನೂ ತಲುಪಿಲ್ಲ. ಟೀಕೆ ಮಾಡಲೆಂದು ಹೇಳಿಲ್ಲ. ಅನಾವಶ್ಯಕವಾಗಿ ಹೆಲಿಕ್ಯಾಪ್ಟರ್ ಬಳಸಿ ದುಂದು ವೆಚ್ಚ ಮಾಡಬೇಡಿ ಎಂದಿದ್ದೆ ಅಷ್ಟೇ’ ಎಂದರು.