Advertisement

ಮುರುಗೇಶ ನಿರಾಣಿ ಗೆಲ್ಲಿಸಲು ಬಿಎಸ್‌ವೈ ಮನವಿ

09:23 AM May 01, 2023 | Team Udayavani |

ಬಾಗಲಕೋಟೆ: ಈ ನಾಡಿನ ಮುಖ್ಯಮಂತ್ರಿಯಾಗಿದ್ದ ಲಿಂಗಾಯತ ನಾಯಕ ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಿ ಅವಮಾನ ಮಾಡಿದ್ದು ಕಾಂಗ್ರೆಸ್‌ ಪಕ್ಷ. ಈಗ ಲಿಂಗಾಯತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಲು ಮುಂದಾಗಿದೆ. ಇಂತಹ ತಂತ್ರಗಾರಿಕೆಗೆ ರಾಜ್ಯದ ಜನ ಸೊಪ್ಪು ಹಾಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಪರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಎಲ್ಲ ರೀತಿಯ ಅಧಿಕಾರ ಅನುಭವಿಸಿ ಹೊರ ಹೋದವರನ್ನು ಮುಂದೆ ಇಟ್ಟುಕೊಂಡು ಲಿಂಗಾಯತ ರಾಜಕೀಯ ಮಾಡಲು ಬಂದರೆ ಜನ ನಂಬಲ್ಲ ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅತ್ಯುತ್ತಮ ಸರ್ಕಾರ ನೀಡಿದೆ. ಇಡೀ ವಿಶ್ವವೇ ಭಾರತ ನೋಡುವಂತೆ ಮಾಡಿದ್ದಾರೆ. ಭಾರತ ಬಲಿಷ್ಠಗೊಳಿಸಿದ ಕೀರ್ತಿ ಬಿಜೆಪಿಗಿದೆ. ಕಾಂಗ್ರೆಸ್‌ ಪಕ್ಷದ ರಾಹುಲ್‌ ಗಾಂಧಿ ಅವರು ನಮ್ಮ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರ ಸರಿಸಮನಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ, ದಿಟ್ಟ ಮಹಿಳೆ ನಿರ್ಮಲಾ ಸೀತಾರಾಮನ್‌ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿದ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ. ಎಲ್ಲ ವರ್ಗದ ಜನರನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುವುದು ಬಿಜೆಪಿಯ ಸಿದ್ಧಾಂತ. ಜಾತಿಗಳನ್ನು ಒಡೆದು ಆಳುವುದು ಕಾಂಗ್ರೆಸ್‌ ಸಂಸ್ಕೃತಿ ಎಂದು ಆರೋಪಿಸಿದರು.

ನಿರಾಣಿ ಗೆಲ್ಲಿಸಿ: ಮುರುಗೇಶ ನಿರಾಣಿ ರಾಜ್ಯದಲ್ಲಿ ಕೈಗಾರಿಕೆ ಕ್ರಾಂತಿ ಮಾಡಿದ್ದಾರೆ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಅವರಿಂದ ಉದ್ಯೋಗ ಪಡೆದವರು ತಲಾ 5 ಮತ ಹಾಕಿಸಿದರೂ ನಿರಾಣಿ ಅವರು 50 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಈ ಚುನಾವಣೆ ಮುಗಿಯುವವರೆಗೂ ಯಾರೂ ವಿಶ್ರಾಂತಿ ಪಡೆಯಬೇಡಿ.ನಿರಾಣಿ ಅವರನ್ನು ಈ ಬಾರಿ ದಾಖಲೆ ಅಂತರದಿಂದ ಬೀಳಗಿ ಕ್ಷೇತ್ರದ ಜನ ಗೆಲ್ಲಿಸಬೇಕು. ಈ ಕ್ಷೇತ್ರದ ಬಸವರಾಜ ಖೋತ, ಶಿವಾನಂದ ನಿಂಗನೂರ ಬಿಜೆಪಿಗೆ ಸೇರಿದ್ದರಿಂದ ಪಕ್ಷಕ್ಕೆ ಆನೆಬಲ ಬಂದಿದೆ ಎಂದರು.

Advertisement

ಬಿಹಾರ ಶಾಸಕ ರಾಣಾರಣಧೀರ ಸಿಂಗ್‌, ವಿಧಾನ ಪರಿಷತ್‌ ಸದಸ್ಯರಾದ ಪಿ.ಎಚ್‌. ಪೂಜಾರ, ಎಚ್‌.ಆರ್‌. ನಿರಾಣಿ, ತಾಲೂಕು ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೊಡ, ಪಪಂ ಅಧ್ಯಕ್ಷ ವಿಠ್ಠಲ ಬಾಗೇವಾಡಿ, ಹನಮಂತ ಮರೆಮ್ಮನ್ನವರ, ಪ್ರಕಾಶ ನಾಯ್ಕ, ಮಲ್ಲಿಕಾರ್ಜುನ ಅಂಗಡಿ, ಸಂಗಮೇಶ ನಿರಾಣಿ ಮುಂತಾದವರು ಉಪಸ್ಥಿತರಿದ್ದರು.

ಬೀಳಗಿ ಕಾಂಗ್ರೆಸ್‌ಗೆ ಶಾಕ್‌ !: ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಜಿಪಂ ಮಾಜಿ ಸದಸ್ಯ, ಪ್ರಬಲ ಲಿಂಗಾಯತ ಸಮುದಾಯದ ಮುಖಂಡ ಬಸವರಾಜ ಖೋತ, ಹಿರಿಯ ಮುಖಂಡ ಶಿವಾನಂದ ನಿಂಗನೂರ, ಎನ್‌.ಬಿ. ಬನ್ನೂರ ಅವರನ್ನು ಬಿಜೆಪಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಬೀಳಗಿ ಕಾಂಗ್ರೆಸ್‌ಗೆ ಶಾಕ್‌ ನೀಡಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಈ ಇಬ್ಬರು ನಾಯಕರು, ರವಿವಾರ ಬಿಜೆಪಿ ಸೇರ್ಪಡೆಗೊಂಡರು.

ಜಿಲ್ಲೆಗೆ ರಾಷ್ಟ್ರ ನಾಯಕರ ದಂಡು:

ಬಾಗಲಕೋಟೆ: ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಲೇ ಇದ್ದು, ರವಿವಾರ ಜಿಲ್ಲೆಗೆ ಬಿಜೆಪಿ-ಕಾಂಗ್ರೆಸ್‌ ನಾಯಕರ ದಂಡು, ಮತಬೇಟೆಗೆ ಬಿರುಸಿನ ಪ್ರಚಾರದಲ್ಲಿ ತೊಡಗಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ, ಜಮಖಂಡಿಯಲ್ಲಿ ಕಾಂಗ್ರೆಸ್‌ ಪರ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಮತದಾರರ ಮನ ಸೆಳೆಯುವ ಪ್ರಯತ್ನ ಮಾಡಿದರು. ಈ ವೇಳೆ ದಿ.ಸಿದ್ದು ನ್ಯಾಮಗೌಡ ಕುಟುಂಬವನ್ನು ಸ್ಮರಿಸಿದರು.

ಜಮಖಂಡಿ ಕ್ಷೇತ್ರದ ತಾಲೂಕು ಕೇಂದ್ರದಲ್ಲಿ ಪ್ರಿಯಾಂಕಾ ಗಾಂಧಿ ಭರ್ಜರಿ ಭಾಷಣ ಮಾಡುತ್ತಿದ್ದರೆ, ಅದೇ ಕ್ಷೇತ್ರದ ತೊದಲಬಾಗಿಯಲ್ಲಿ ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು, ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಪರ ಮತಯಾಚಿಸಿಸಿದರು. ಯಡಿಯೂರಪ್ಪ ಅವರು, ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಗುಡಗುಂಟಿ ಅವರನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಇನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್‌, ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ|ಚರಂತಿಮಠ ಪರ ಪ್ರಚಾರ ನಡೆಸಿದರು. ಇದಕ್ಕೂ ಮುಂಚೆ ಜಿಲ್ಲೆಯ ಬಿಜೆಪಿ ಶಕ್ತಿ ಕೇಂದ್ರಗಳ ಸಭೆ ನಡೆಸಿ, ಈ ಚುನಾವಣೆಯಲ್ಲಿ ಬಿಜೆಪಿಯ ಏಳೂ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರದೊಂದಿಗೆ ಕೆಲಸ ಮಾಡಲು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next