Advertisement

Bsy: ಬಿಎಸ್‌ವೈ ವಿರುದ್ಧ ಪೋಕ್ಸೋ ಕೇಸ್‌ ದಾಖಲಿಸಿದ್ದಾಕೆ ನಟೋರಿಯಸ್‌: ವಾದ

11:06 AM Dec 11, 2024 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ದಾಖಲಿಸಿರುವ ಮಹಿಳೆ ಒಬ್ಬ ನಟೋರಿಯಸ್‌, ದೂರು ದಾಖಲಿಸುವುದು ಆಕೆಯ ಚಾಳಿ ಆಗಿತ್ತು. ಅಂತಹ ಮಹಿಳೆ ದಾಖಲಿ ಸಿರುವ ದೂರನ್ನು ಸತ್ಯ ವೆಂದು ಭಾವಿಸಬಾರದು ಎಂದು ಯಡಿಯೂರಪ್ಪ ಪರ ವಕೀಲ ಸಿ.ವಿ. ನಾಗೇಶ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Advertisement

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌, ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ವಾರೆಂಟ್‌ ಹೊರಡಿಸಲಾಗಿತ್ತು. ಆದರೆ, ವಿಚಾರಣೆಗೆ ಖುದ್ದು ಹಾಜರಿಗೆ ವಿನಾಯಿತಿ ನೀಡಿ ಈ ಹಿಂದೆ ನೀಡಿರುವ ಮಧ್ಯಂತರ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌, ಪೋಕ್ಸೋ ವಿಶೇಷ ನ್ಯಾಯಾಲಯದ ನೋಟಿಸ್‌ಗೆ ಅರ್ಜಿದಾರರ ಪರ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹೈಕೋರ್ಟ್‌ ನಿಂದ ಮಧ್ಯಂತರ ರಕ್ಷಣೆ ಪಡೆದು ವಿಚಾರಣೆಗೂ ಹಾಜರಾಗಿದ್ದಾರೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದು ಆರೋಪಿಯ ಹಕ್ಕು. ನಂತರ ವಿಚಾರಣೆಗೆ ಕರೆದಾಗ ಹಾಜರಾಗಿದ್ದಾರೆ ಎಂದರು.

ಅಲ್ಲದೆ, ಘಟನೆ ಫೆಬ್ರವರಿ 2ರಂದು ಬೆಳಗ್ಗೆ 11ರಿಂದ 11.30ರ ಸಮಯದಲ್ಲಿ ಅರ್ಜಿದಾರರ ಮನೆಯಲ್ಲಿ ನಡೆದಿದೆ ಎನ್ನುವ ಆರೋಪವಿದೆ. ಆಗ ಸ್ಥಳದಲ್ಲಿ 20ರಿಂದ 25 ಜನ ಇದ್ದರು. ಇಷ್ಟೊಂದು ಜನರ ಸಮ್ಮುಖದಲ್ಲಿ ಇದು ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ ಸಿ.ವಿ. ನಾಗೇಶ್‌, ಘಟನೆ ನಡೆದ ಒಂದೂವರೆ ತಿಂಗಳ ಬಳಿಕ ದೂರು ದಾಖಲಿಸಲಾಗಿದೆ. ಈ ನಡುವೆ ದೂರುದಾರರು ಹಲವು ಬಾರಿ ಅರ್ಜಿದಾರರ ಮನೆಗೆ ಬಂದಿದ್ದಾರೆ. ದೂರುದಾರ ಮಹಿಳೆ ಒಬ್ಬ ನಟೋರಿಯಸ್‌ ಆಗಿದ್ದು, ದೂರು ದಾಖಲಿ ಸುವುದು ಆಕೆಯ ಚಾಳಿ ಆಗಿತ್ತು. ಪತಿ, ಮಗ, ರಾಜಕಾ ರಣಿ, ಪೊಲೀಸ್‌ ಅಧಿಕಾರಿ ಎಲ್ಲರ ಮೇಲೂ 50ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ. ಇಂತಹ ಮಹಿಳೆ ದಾಖಲಿಸಿದ ದೂರು ಸತ್ಯವೆಂದು ಭಾವಿಸಬಾರದು ಎಂದರು.

Advertisement

ದೂರುದಾರ ಮಹಿಳೆಗೆ ನಟೋರಿಯಸ್‌ ಎಂದು ಅಪಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ. ಈಗ ಮಹಿಳೆ ಇಲ್ಲ, ತೀರಿ ಹೋಗಿದ್ದಾರೆ. ಮರಣ ಹೊಂದಿದವರ ಬಗ್ಗೆ ಈ ರೀತಿ ಹೇಳುವುದು ಸಮಂಜಸವಲ್ಲ ಎಂದು ದೂರುದಾರರ ಪರ ವಕೀಲರು ಆಕ್ಷೇಪಿಸಿದರು. ಅದಕ್ಕೆ ಆಯಿತು ಹಾಗೇ ಹೇಳುವುದಿಲ್ಲ ಎಂದು ಬಿಎಸ್‌ವೈ ಪರ ವಕೀಲರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next