ಬೆಂಗಳೂರು: ಮಹದಾಯಿ ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಬಿಜೆಪಿ ಕಚೇರಿ ಮುಂದೆ ಬುಧವಾರ ಹೈಡ್ರಾಮಾ ನಡೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಖಡಕ್ ಸೂಚನೆ ಬಳಿಕ ಮಹದಾಯಿ ಹೋರಾಟಗಾರರನ್ನು ಭೇಟಿಯಾಗಿ ಸಂಧಾನ ಮಾತುಕತೆ ನಡೆಸಿದರೂ ಕೂಡಾ ವಿಫಲವಾಗಿದೆ.
ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿಯಾಗಿದ್ದರು.
ಬಿಎಸ್ ವೈ ಸಂಧಾನ ವಿಫಲ:
ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದಮಠ ಅವರಲ್ಲಿ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಸುಮಾರು 10 ನಿಮಿಷಗಳ ಕಾಲ ಚರ್ಚೆ ನಡೆಸಿದರು, ಆದರೆ ಯಡಿಯೂರಪ್ಪನವರ ಸಂಧಾನಕ್ಕೆ ರೈತರು ಬಗ್ಗಿಲ್ಲ. ಕೊನೆಗೂ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕೈಮುಗಿದು ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಿದ್ದರು. ಬಿಎಸ್ ವೈ ಜತೆಗಿನ ಚರ್ಚೆ ಬಳಿಕ ಮಹದಾಯಿ ಹೋರಾಟಗಾರರು ಕಣ್ಣೀರು ಹಾಕಿದರು, ಅಲ್ಲದೇ ಧರಣಿ ನಿರತರು ಬಿಜೆಪಿ ವಿರುದ್ಧ ಬಾಯಿಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ನಾ ಹಾಗೇ ಹೇಳಿಯೇ ಇಲ್ಲ ಅಂದ್ರು!
ಮಹದಾಯಿ ಹೋರಾಟಗಾರರ ಜತೆ ಸಂಧಾನ ವಿಫಲವಾದ ಬಳಿಕ ವೀರೇಶ್ ಸೊಬರದಮಠ ಸುದ್ದಿಗಾರರ ಜತೆ ಮಾತನಾಡಿ, 15 ದಿನದೊಳಗೆ ಮಹದಾಯಿ ವಿವಾದ ಬಗೆಹರಿಸುವುದಾಗಿ ಹೇಳಿದ್ದೀರಿ. ಅದರ ಆದೇಶ ಪ್ರತಿಯನ್ನು ಕೊಡಿ ಎಂದಾಗ, ಅದೆಲ್ಲಾ ನಮ್ಮಿಂದ ಆಗಲ್ಲ. ಇದೇ ಪತ್ರವನ್ನು ತೆಗೆದುಕೊಳ್ಳಿ ಎಂದು ಹೇಳಿದರು, ಅದಕ್ಕೆ ನಾವು ಒಪ್ಪಿಲ್ಲ. ಅಲ್ಲದೇ ನಾ ಇತ್ಯರ್ಥಪಡಿಸುತ್ತೇನೆ ಎಂದು ಹೇಳಿಯೇ ಇಲ್ಲ ಎಂದು ಸುಳ್ಳು ಹೇಳಿದರು ಎಂಬುದಾಗಿ ಆರೋಪಿಸಿದ್ದಾರೆ.