ದಾವಣಗೆರೆ: ಬಿಜೆಪಿ ಅಲ್ಪ ಸಂಖ್ಯಾತ ಮುಸ್ಲಿಮರ ವಿರೋಧಿಯಲ್ಲ. ಬಿ.ಎಸ್.ಯಡಿಯೂರಪ್ಪ ನುಡಿದಂತೆ ನಡೆಯುವ ಮುಖ್ಯಮಂತ್ರಿ ಎಂದು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಎಸ್.ಅಬ್ದುಲ್ ಮಜೀದ್ ಹೇಳಿದ್ದಾರೆ.
ಸೋಮವಾರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ. ಎಲ್ಲಾ ಧರ್ಮದವರ ಅಭಿವೃದ್ಧಿ ಆಲೋಚನೆ ಹೊಂದಿದವರು. ಈ ಹಿಂದೆ ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ಅಲ್ಪ ಸಂಖ್ಯಾತ ಮುಸ್ಲಿಮರಿಗೆ ಹಲವು ಯೋಜನೆಗಳನ್ನು ಜಾರಿ ತಂದವರು ಎಂದರು.
ಈ ಹಿಂದೆ ಮುಸ್ಲಿಮ್ ಸಮುದಾಯದ ಮಮ್ತಾಜ್ ಅಲಿಖಾನ್ ಅವರನ್ನು ಮಂತ್ರಿಯನ್ನಾಗಿಸಿದ್ದರು. ಹಜ್ ಭವನಕ್ಕೆ 40 ಕೋಟಿ ಅನುದಾನ ನೀಡಿದ್ದರು. ಖಬರ್‌ಸ್ತಾನ್ ಕಂಪೌಂಡ್ ನಿರ್ಮಿಸಲು 5 ಕೋಟಿ ಮಂಜೂರು ಮಾಡಿದ್ದರು. ಶಿಕಾರಿಪುರದಲ್ಲಿ ಹೈಟೆಕ್ ಮದರಸಾ ನಿರ್ಮಿಸಲು ಕಾರಣರಾದರು. ಪೇಶ್ಮಾ ಮೌಜನ್ ಗುರುಗಳಿಗೆ ವೇತನ ನೀಡಲು 5 ಕೋಟಿ ರೂ. ಬಜೆಟ್‌ನಲ್ಲಿ ಇಟ್ಟಿದ್ದರು. ಹಜ್ ಯಾತ್ರೆ ಕೈಗೊಳ್ಳುವವರಿಗೆ ಮಂಗಳೂರಿನಿಂದ ನೇರವಾಗಿ ಜೇದ್ದಾಗೆ ತೆರಳಲು ಅನುವು ಮಾಡಿಕೊಟ್ಟಿದ್ದಲ್ಲದೆ, ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮ್ ಸಮುದಾಯಕ್ಕೆ ಹಲವಾರು ಯೋಜನೆ ಕಾರ್ಯಗತಗೊಳಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ 70 ವರ್ಷಗಳಿಂದ ಮುಸ್ಲಿಮ್‌ರನ್ನು ಓಟ್ ಬ್ಯಾಂಕ್ ಮಾಡಿಕೊಂಡಿದೆ. ಆದರೆ, ಮುಸ್ಲಿಮ್‌ರು ತಮಗೆ ಮತ ನೀಡದಿದ್ದರೂ ಯಡಿಯೂರಪ್ಪನವರು ನಮ್ಮ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೂಮ್ಮೆ ಅಧಿಕಾರ ವಹಿಸಿಕೊಂಡಿರುವುದರಿಂದ ನಮ್ಮ ಸಮುದಾಯಕ್ಕೆ ಮತ್ತಷ್ಟು ನೆರವು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಐಎಂಎ ಪ್ರಕರಣ ಎಸ್‌ಐಟಿಯಿಂದ ಈಗ ಇಡಿಗೆ ವಹಿಸಲಾಗಿದೆ. ಮೇಲಾಗಿ ಬಿಎಸ್‌ವೈ ಮತ್ತೆ ಸಿಎಂ ಆಗಿರುವುದರಿಂದ ನಮಗೆ ಐಎಂಎನಿಂದ ವಂಚನೆಗೊಳಗಾದವರಿಗೆ ನ್ಯಾಯ ಸಿಗುವ ಭರವಸೆ ಹೆಚ್ಚಿದೆ ಎಂದು ಹೇಳಿದರು.
ಹಳೇ ದಾವಣಗೆರೆಯ ಮುಸ್ಲಿಮ್‌ರು ವಾಸಿಸುವ ಪ್ರದೇಶದ ಅಭಿವೃದ್ಧಿಗಾಗಿ ಬಿಎಸ್‌ವೈ ಸಿಎಂ ಆಗಿದ್ದಾಗ ಹಣ ಬಿಡುಗಡೆ ಮಾಡಿದ್ದರು. ಆದರೆ, ಕೆಲವರು ತಮ್ಮಿಂದಲೇ ಆ ಕೆಲಸ ಆಯಿತೆಂದು ಬಿಂಬಿಸಿಕೊಂಡರು ಎಂದು ಅವರು ದೂರಿದರು.
ಬಿ.ಎಸ್.ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾದಲ್ಲಿ ನಾನು ಅವರ ಮನೆ ವಾಚ್‌ಮನ್ ಆಗಿ ಮೂರು ದಿನ ಕೆಲಸ ಮಾಡುವೆ ಎಂಬುದಾಗಿ ಸವಾಲು ಹಾಕಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಈಗ ಹೇಳಿದಂತೆ ನಡೆದು ಕೊಳ್ಳಲಿ ಅವರು ತಾಕೀತು ಮಾಡಿದರು.
ಉಮೇಶ್ ಪಾಟೀಲ್, ಸೈಯದ್ ಗೌಸ್, ಮಹಮದ್ ನೂರ್, ಜಾಫರ್ ಷರೀಫ್, ಜಮೀಲ್ ಅಹ್ಮದ್, ಮಹಮದ್ ಜಕ್ರಿಯಾ, ಇತರರು ಈ ಸಂದರ್ಭದಲ್ಲಿದ್ದರು.