ಮಂಗಳೂರು : ಬೆಳ್ತಂಗಡಿ ತಾಲೂಕು ತಣ್ಣೀರುಪಂಥ ಗ್ರಾಮದ ದೇಸಿನ್ ಕೊಡಿ ರವಿ ಪೂಜಾರಿ ಅವರ ಮೂರು ವರ್ಷ 7 ತಿಂಗಳು ವಯಸ್ಸಿನ ಮಗಳಾದ ಕುಮಾರಿ ಆರಾಧ್ಯ, ಶ್ರವಣದೋಷದ ಚಿಕಿತ್ಸೆಗೆ ಮುಖ್ಯಮಂತ್ರಿ ಸ್ಪಂದಿಸಿದ್ದು ಚಿಕಿತ್ಸೆಗಾಗಿ 5ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ನೀಡಿದ್ದಾರೆ.
ಆರಾಧ್ಯ ಶ್ರವಣ ದೋಷದ ಸಮಸ್ಯೆಯಿಂದ ಬಳಲುತ್ತಿದ್ದು ಆಕೆಯ ಶ್ರವಣ ದೋಷದ ಪರೀಕ್ಷೆಗಾಗಿ ಮಾನಸ ಇ.ಎನ್.ಟಿ ಕೇಂದ್ರದ ತಜ್ಞ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ನಡೆಸಿದ ವೈದ್ಯರು ಸೂಕ್ತ ಚಿಕಿತ್ಸೆಯ ಮೂಲಕ ಶ್ರವಣ ದೋಷವನ್ನು ನಿವಾರಿಸಲು ಸಾಧ್ಯ ಎಂದು ತಿಳಿಸಿದ್ದಾರೆ ಅಲ್ಲದೆ ಚಿಕಿತ್ಸೆಗಾಗಿ ಸುಮಾರು ಹದಿನಾಲ್ಕು ಲಕ್ಷ ರೂ. ವೆಚ್ಚವಾಗಲಿದೆ ಎಂದಿದ್ದರು.
ಆದರೆ ಆರಾಧ್ಯ ತಂದೆ ರವಿ ಪೂಜಾರಿ ಅವರು ಮಂಗಳೂರಿನ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿ ಇರುವುದರಿಂದ ಅಷ್ಟೊಂದು ದೊಡ್ಡ ಮೊತ್ತದ ಬಿಲ್ಲನ್ನು ಪಾವತಿಸಲು ಅಸಾಧ್ಯವಾಗಿತ್ತು.
ಇದನ್ನೂ ಓದಿ:ವಿನಯ ಕುಲಕರ್ಣಿ ಬಿಜೆಪಿ ಸೇರುತ್ತಾರೆ ಎನ್ನುವುದು ಶುದ್ಧ ಸುಳ್ಳು : ಬಿ.ಎಸ್. ಯಡಿಯೂರಪ್ಪ
ಗುರುವಾರ ಮಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಶಾಸಕ ಹರೀಶ್ ಪೂಂಜಾರ ಮುಖಾಂತರ ಭೇಟಿಯಾಗಿ ಮಗುವಿನ ಚಿಕಿತ್ಸೆಗೆ ಸಹಾಯವನ್ನು ಕೋರಿದಾಗ ಮಾನ್ಯ ಮುಖ್ಯಮಂತ್ರಿಗಳು ತಕ್ಷಣ 5ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ನೀಡಿದ್ದಾರೆ.