Advertisement

ಬಿಎಸ್‌ವೈ ಸಿಎಂ; ಸಿದ್ದು ಗ್ಯಾಂಗ್‌ಗೆ ಅಪಥ್ಯ

11:33 PM Nov 03, 2019 | Team Udayavani |

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರ ರಚನೆಯಾಗಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಸಿದ್ದರಾಮಯ್ಯ ಹಾಗೂ ದಿನೇಶ ಗುಂಡೂರಾವ್‌ ಗ್ಯಾಂಗ್‌ಗೆ ಇಷ್ಟವಿರಲಿಲ್ಲ. ಇದೀಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರಿಂದ ಸಹಿಸಿಕೊಳ್ಳಲಾಗದೆ ಸಣ್ಣ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಮಾಡಲು ಕೆಲಸವಿಲ್ಲ. ರಾಜ್ಯದಲ್ಲಿ ಬಿಜೆಪಿ ಜನಸ್ನೇಹಿ ಆಡಳಿತ ನೀಡುತ್ತಿದೆ. ಹೀಗಾಗಿ ವಿಪಕ್ಷ ದವರಿಗೆ ಮಾತನಾಡಲು ಯಾವುದೇ ವಿಚಾರಗಳಿಲ್ಲ. ಸಣ್ಣ ಪುಟ್ಟ ವಿಚಾರಗಳನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಒತ್ತು ಕೊಡುವ ಅಗತ್ಯವಿಲ್ಲ ಎಂದರು.

ಮುಖಂಡರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ ದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿ ರಾಜ್ಯ ಘಟಕ ಸ್ಪಷ್ಟನೆ ಕೊಟ್ಟಿದೆ. ಸ್ವತಃ ಯಡಿಯೂರಪ್ಪನವರೇ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡುವುದು ಸರಿಯಲ್ಲ, ಸಮ್ಮಿಶ್ರ ಸರ್ಕಾರ ಬೀಳಲು ಡಿ.ಕೆ.ಶಿವಕುಮಾರ ಅವರೇ ಕಾರಣ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ವೈಯಕ್ತಿಕ. ಅದು ಕಾಂಗ್ರೆಸ್‌ನ ಆಂತರಿಕ ವಿಚಾರ. ರಮೇಶ ಆ ಪಕ್ಷದಲ್ಲಿ ಇದ್ದಿದ್ದರಿಂದ ಅಲ್ಲಿನ ವಿಚಾರಗಳು ಗೊತ್ತಿರುತ್ತವೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಬೀಳಲು ಡಿಕೆಶಿ ಕಾರಣ ಎಂದು ಹೇಳಿರಬಹುದು ಎಂದು ಹೇಳಿದರು.

ನ.18ರಿಂದ ಡಿ.13ರವರೆಗೆ ಚಳಿಗಾಲದ ಸಂಸತ್‌ ಅಧಿವೇಶನ ನಡೆಯಲಿದೆ. ರಾಜ್ಯ ಸಭೆಯಲ್ಲಿ ನಾಲ್ಕು, ಲೋಕಸಭೆಯಲ್ಲಿ ಎರಡು ಬಿಲ್‌ಗ‌ಳು ಬಾಕಿ ಉಳಿದಿವೆ. ಹಣಕಾಸು ಸೇರಿದಂತೆ ಬೇರೆ ಇಲಾಖೆಯ ಮಸೂದೆಗಳಿವೆ. ಈ ಎಲ್ಲ ಬಿಲ್‌ಗ‌ಳ ಕುರಿತು ಚರ್ಚಿ ಸಲು ನ.5ಕ್ಕೆ ಸಭೆ ಆಯೋಜಿಸಲಾಗಿದೆ. ಪ್ರಧಾನ ಮಂತ್ರಿಗಳ ಅನು ಮತಿ ಪಡೆದು ಸರ್ವಪಕ್ಷಗಳ ಸಭೆ ಕರೆಯುವುದಾಗಿ ತಿಳಿಸಿದರು.

ಪ್ರಧಾನಿ ಪ್ರತಿಕ್ರಿಯಿಸದಿರುವುದು ವಿಷಾದನೀಯ’
ಹಾಸನ: “ಆಪರೇಷನ್‌ ಕಮಲದ ಮೂಲಕ ಬಿಜೆಪಿ ಪ್ರತಿಪಕ್ಷ ಶಾಸಕರನ್ನು ಸೆಳೆದು ಸರ್ಕಾರ ರಚಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ನಡವಳಿಕೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ಆಲೂರು ತಾಲೂಕಿನ ಹಳೆ ಪಾಳ್ಯದಲ್ಲಿ ದೇವಾಲಯ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಯಡಿಯೂರಪ್ಪ ಅವರ ವಿಡಿಯೋ ಬಹಿರಂಗವಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಆಡಿಯೋ ಆಧರಿಸಿ ಕಾಂಗ್ರೆಸ್‌ನವರು ರಾಜ್ಯಪಾಲರಿಗೆ ಈಗಾಗಲೇ ದೂರು ನೀಡಿದ್ದಾರೆ. ರಾಷ್ಟ್ರಪತಿಗಳಿಗೂ ದೂರು ನೀಡುವುದಾಗಿ ಹೇಳಿದ್ದಾರೆ.

Advertisement

ಆದರೆ ಆಡಿಯೋ ವಿಚಾರ ಈಗಾಗಲೇ ಪ್ರಧಾನಿ ಹಾಗೂ ರಾಷ್ಟ್ರಪತಿಯವರಿಗೂ ಗೊತ್ತಿದೆ. ಆದರೂ ಅವರಿಬ್ಬರೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ವಿಷಾದನೀಯ ಎಂದರು. ಉತ್ತರಾಂಚಲದಲ್ಲಿ ಕುದುರೆ ವ್ಯಾಪಾರ ಆರೋಪದಡಿ ಅಲ್ಲಿನ ಮುಖ್ಯಮಂತ್ರಿ ರಾವತ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಕೇಂದ್ರದ ಅಣತಿಯಂತೆಯೇ ಇದೆಲ್ಲಾ ನಡೆದಿದೆ. ಅದೇ ಮಾನದಂಡ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅನ್ವಯ ಆಗ‌ಬೇಕು ಎಂದು ಹೇಳುವ ಮೂಲಕ ಆಪರೇಷನ್‌ ಕಮಲ ಆರೋಪದಡಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧವೂ ಪ್ರಕರಣ ದಾಖಲಾಗಲಿ ಎಂದು ಪರೊಕ್ಷವಾಗಿ ಒತ್ತಾಯ ಮಾಡಿದರು.

ಬಿಎಸ್‌ವೈ ವಿಡಿಯೋ ಟೇಪ್‌ ನಕಲಿ: ಶ್ರೀರಾಮುಲು
ಹರಿಹರ: ಅನರ್ಹ ಶಾಸಕರ ಕುರಿತು ಸಿಎಂ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಮಾತ ನಾಡಿದ್ದಾರೆಂದು ಆರೋಪಿಸಲಾಗು ತ್ತಿರುವ ವಿಡಿಯೋ ಟೇಪ್‌ ನಕಲಿ ಯಾಗಿರುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ವಿಪಕ್ಷಗಳು ಬಹಿರಂಗಗೊಳಿಸಿರುವ ವಿಡಿಯೋ ನೈಜವಲ್ಲ,

ಬಿಎಸ್‌ವೈ ಧ್ವನಿಯನ್ನು ಯಾರೋ ನಕಲಿ ಮಾಡಿ ಆಡಿಯೋ ಟೇಪ್‌ ಸೃಷ್ಟಿಸಿ ಹರಿಬಿಟ್ಟಿರುವ ಅನುಮಾನವಿದೆ. ಶತಾಯಗತಾಯ ಬಿಜೆಪಿ ಸರ್ಕಾರ ಉರುಳಿಸಲು ವಿಪಕ್ಷದವರು ಹಗಲಿರುಳು ಶ್ರಮಿಸುತ್ತಿದ್ದು, ಇದರ ಫಲವೇ ಈ ನಕಲಿ ಆಡಿಯೋ ಟೇಪ್‌ ಎಂಬುದು ನನ್ನ ಅಭಿಪ್ರಾಯ. ಆದರೆ ರಾಜ್ಯ ಸರ್ಕಾರ ತನ್ನ ಅವ ಧಿ ಪೂರ್ಣಗೊಳಿಸುತ್ತದೆ. ಈಗಾಗಲೆ ಸಿಎಂ ಬಿಎಸ್‌ವೈ ಈ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದರು.

“ಬಿಎಸ್‌ವೈ ವಿಡಿಯೋ’ ಸಿಬಿಐ ತನಿಖೆಯಾಗಲಿ
ದಾವಣಗೆರೆ: ಬಿಜೆಪಿ ಸಭೆಯಲ್ಲಿ ಸಿಎಂ ಯಡಿ ಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗಗೊಂಡಿದ್ದು, ಈ ಪ್ರಕರಣ ವನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಸಚಿವ ಯು.ಟಿ. ಖಾದರ್‌ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವತಃ ಸಿಎಂ ಯಡಿಯೂರಪ್ಪ ಅವರೇ ತಾನೇ ಮಾತನಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ವಿಡಿಯೋ ಬಗ್ಗೆ ಬೇರೆ ಸಾಕ್ಷಿ ಅಗತ್ಯವೇ ಇಲ್ಲ. ಆದರೆ ಈಗ ವಿಡಿಯೋ ಟ್ಯಾಂಪರಿಂಗ್‌ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಪ್ರಕರಣ ವನ್ನು ಸಿಬಿಐ ತನಿಖೆಗೆ ಒಪ್ಪಿಸುವುದರಿಂದ ಎಲ್ಲಾ ಗೊಂದಲಕ್ಕೆ ಸ್ಪಷ್ಟತೆ ದೊರೆಯಲಿದೆ ಎಂದರು. ವಿಡಿಯೋದಲ್ಲಿ ಸಿಎಂ ಯಡಿಯೂರಪ್ಪ ಆಪರೇಷನ್‌ ಕಮಲದ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಾತ್ರ ಇದ್ದ ಬಗ್ಗೆಯೂ ಹೇಳಿದ್ದಾರೆ. ರಾಜ್ಯಪಾಲರು ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು. ಕೇಂದ್ರದ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು. ರಾಜ್ಯ ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅನುಕೂಲ ಆಗುವ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ ಎಂದರು.

ಇಂದು ಕಾಂಗ್ರೆಸ್‌ ಪ್ರತಿಭಟನೆ
ಬೆಂಗಳೂರು/ ಕೆಂಗೇರಿ: ಯಡಿಯೂರಪ್ಪ ಮಾತನಾಡಿರುವ ವಿಡಿಯೋ ಬಗ್ಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಸೋಮವಾರ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಿದ್ದು, ಯಡಿಯೂರಪ್ಪ ಆಡಿರುವ ಮಾತುಗಳು ರಾಷ್ಟ್ರಾದ್ಯಂತ ಸುದ್ದಿಯಾಗಿದೆ.

ಈ ಬಗ್ಗೆ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗಮನ ಸೆಳೆಯಬೇಕಿದೆ. ಆದ್ದರಿಂದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಹಾಗೂ ಇದರ ಸೂತ್ರಧಾರರಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕೇಂದ್ರ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next