ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿ, ರಾತೋರಾತ್ರಿ ಬದಲಾವಣೆಯಾಗಿದ್ದರೂ ಇನ್ನೂ ಕೆಲವು ಸಚಿವರ ಅಸಮಾಧಾನ ಶಮನವಾಗಿಲ್ಲ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು ಮತ್ತೆ ಬದಲಾವಣೆಗೆ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.
ಆರಂಭದಲ್ಲಿ ಆಹಾರ ಖಾತೆ ಪಡೆದಿದ್ದ ಆನಂದ್ ಸಿಂಗ್ ರಾತೋರಾತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿ ಅರಣ್ಯ ಖಾತೆ ಹಂಚಿಕೆ ಮಾಡಿಸಿಕೊಂಡರು. ಈಗ ಅರಣ್ಯ ನಿಯಮ ಉಲ್ಲಂಘನೆ ಪ್ರಕರಣಗಳು ಅವರ ಮೇಲಿರುವ ಬಗ್ಗೆ ಸಾರ್ವತ್ರಿಕವಾಗಿ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಖಾತೆ ಬದಲಾವಣೆ ಮಾಡಿಸಿಕೊಳ್ಳಲು ಮತ್ತೆ ತೆರೆಮರೆಯಲ್ಲೇ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಸದ್ಯ ಯಾವುದೇ ಸಚಿವರ ಖಾತೆ ಯಲ್ಲೂ ಬದಲಾವಣೆ ಮಾಡುವುದಿಲ್ಲ. ನೀಡಿರುವ ಖಾತೆಯನ್ನೇ ಚೆನ್ನಾಗಿ ನಿಭಾಯಿಸಿ ಎಂಬ ಸ್ಪಷ್ಟ ಸಂದೇಶವನ್ನು ಸಿಎಂ ಯಡಿಯೂರಪ್ಪ ನೂತನ ಸಚಿವರಿಗೆ ರವಾನಿಸಿದ್ದಾರೆ. ಈ ಎಲ್ಲ ಘಟನಾವಳಿಗಳನ್ನು ಬಿಜೆಪಿ ಹೈಕಮಾಂಡ್ ಸೂಕ್ಷ್ಮವಾಗಿ ಪರಿಗಣಿಸುತ್ತಿದೆ ಎಂದು ತಿಳಿದುಬಂದಿದೆ.
ನೂತನ ಸಚಿವರಿಗೆ ಹಂಚಿಕೆ ಮಾಡಿರುವ ಖಾತೆಯಲ್ಲಿ ಈಗಾಗಲೇ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಮೂಲ ಬಿಜೆಪಿಗರಲ್ಲಿ ಸ್ವಲ್ಪ ಮಟ್ಟಿನ ಸಮಾಧಾನವೂ ಉಂಟಾಗಿದೆ. ಈಗ ಮತ್ತೆ ಖಾತೆ ಬದಲಾವಣೆ ಮಾಡಿದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವುದಲ್ಲದೆ ಮೂಲ ಬಿಜೆಪಿಗರ ವಿಶ್ವಾಸವನ್ನು ಕಳೆದುಕೊಳ್ಳುವ ಅಪಾಯ ಇರುವುದರಿಂದ ಮುಂದಿನ ಸಂಪುಟ ವಿಸ್ತರಣೆಯವರೆಗೂ ಯಾವುದೇ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ನೂತನ ಸಚಿವರಿಗೆ ರವಾನಿಸಲಾಗಿದೆ.
ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರಲ್ಲಿ ಡಾ| ಸುಧಾಕರ್, ಎಸ್.ಟಿ. ಸೋಮಶೇಖರ್ ಮತ್ತು ಬಿ.ಸಿ. ಪಾಟೀಲ್ ಮೊದಲಾದವರಿಗೆ ವಿಕಾಸಸೌಧದಲ್ಲಿ ಕಚೇರಿ ನೀಡಿದ್ದು, ಸಚಿವರಾಗಿ ಕಾರ್ಯಾರಂಭಿಸಿದ್ದಾರೆ. ಇನ್ನು ಕೆ. ಗೋಪಾಲಯ್ಯ ಮೊದಲಾದ ಸಚಿವರು ಗುರುವಾರ ವಿಧಾನಸೌಧದಲ್ಲಿ ತಮ್ಮ ಕಚೇರಿ ಉದ್ಘಾಟನೆ ಮಾಡಿ ಕಾರ್ಯಾರಂಭಿಸಿದ್ದಾರೆ.
ಕೊಠಡಿಗೆ ಪಟ್ಟು
ನೂತನ ಸಚಿವರಲ್ಲಿ ಕೆಲವರು ಖಾತೆಗಾಗಿ ಪಟ್ಟು ಹಿಡಿದಿದ್ದು ಮಾತ್ರವಲ್ಲದೆ, ವಿಧಾನ ಸೌಧದಲ್ಲೇ ಕೊಠಡಿ ಬೇಕು ಎಂದೂ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಆದರೆ ಮುಖ್ಯಮಂತ್ರಿಯವರು ಕೆಲವರಿಗೆ ವಿಕಾಸಸೌಧದಲ್ಲಿ ಹಂಚಿಕೆ ಮಾಡಿ, ಆ ವಿಚಾರದಲ್ಲಿ ಯಾವುದೇ ರೀತಿಯ ಅಸಮಾಧಾನ ಹೊಗೆಯಾಡದಂತೆ ಎಚ್ಚರ ವಹಿಸಿದ್ದಾರೆ. ಖಾತೆ ಹಂಚಿಕೆ ಅಥವಾ ಕೊಠಡಿ ಹಂಚಿಕೆ ಬಗ್ಗೆ ಯಾವುದೇ ಅಸಮಾಧಾನಗಳಿದ್ದರೂ ಬಹಿರಂಗ ವಾಗಿ ಹೇಳಿಕೆ ನೀಡದಂತೆಯೂ ಸೂಚಿಸಿದ್ದಾರೆ ಎನ್ನಲಾಗಿದೆ.