ಬೆಂಗಳೂರು: ಶಿವರಾಮ ಕಾರಂತ ಬಡಾವಣೆಯ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಯಿಂದ 257. ಎಕರೆ 20.5 ಗುಂಟೆ ಜಮೀನು ಕೈ ಬಿಡುವಂತೆ ಸೂಚಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಭೂ ಮಾಲೀಕರಿಂದ ಹಣ ಪಡೆದುಕೊಂಡಿದ್ದರು ಎಂಬ ಬಗ್ಗೆ ದೂರಿನಲ್ಲಿಯೇ ಉಲ್ಲೇಖವಾಗಿದೆ ಎಂದು ಎಸಿಬಿ ಹೈಕೋರ್ಟ್‌ಗೆ ತಿಳಿಸಿದೆ.
ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಏಕಸದಸ್ಯಪೀಠಕ್ಕೆ, ಎಸಿಬಿ ಪರ ವಕೀಲ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಈ ಮಾಹಿತಿ ನೀಡಿದರು.
ಪ್ರೊ.ರವಿವರ್ಮಕುಮಾರ್, ಅವರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿತು.ಜೊತೆಗೆ ಮುಂದಿನ ವಿಚಾರಣೆಯವರೆಗೆ ಅರ್ಜಿದಾರ ಬಿ.ಎಸ್ ಯಡಿಯೂರಪ್ಪನವರನ್ನು ಬಂಧಿಸದಂತೆ ನೀಡಲಾಗಿರುವ ಮಧ್ಯಂತರ ಆದೇಶವನ್ನೂ ವಿಸ್ತರಿಸಿತು.ಇದಕ್ಕೂ ಮೊದಲು ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ಪ್ರೊ.ರವಿವರ್ಮಕುಮಾರ್, ಅರ್ಜಿದಾರ ಯಡಿಯೂರಪ್ಪನವರ ವಿರುದ್ಧ ಡಿನೋಟಿಫಿಕೇಶನ್ ಆರೋಪ ಸಂಬಂಧ ಎಸಿಬಿಗೆ ದೂರು ನೀಡಿರುರುವ ದೂರುದಾರರು, ಶಿವರಾಮ ಕಾರಂತ ಬಡಾವಣೆಯ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಯಿಂದ 257. ಎಕರೆ 20.5 ಗುಂಟೆ ಜಮೀನು ಕೈ ಬಿಡುವಂತೆ ಸೂಚಿಸಿದ್ದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಭೂ ಮಾಲೀಕರಿಂದ ಹಣ ಪಡೆದುಕೊಂಡಿದ್ದಾರೆ. ಭೂ ಮಾಲೀಕರ ಹಿತ ಕಲ್ಯಾಣದ ಜೊತೆಗೆ ಸ್ವ ಕಲ್ಯಾಣವನ್ನು ಮಾಡಿಕೊಂಡಿದ್ದಾರೆ.
ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟ ಜಮೀನಿನ ಮೌಲ್ಯ ಆಗ 200 ಕೋಟಿ ರೂ.ಗಳಿಗೂ ಅಧಿಕವಾಗಿತ್ತು .ತನ್ನದಲ್ಲದ ಅಧಿಕಾರವನ್ನು ಬಳಸಿಕೊಂಡಿರುವ ಯಡಿಯೂರಪ್ಪ ಭೂ ಮಾಲೀಕರಿಂದ ಹಣ ಪಡೆದುಕೊಂಡೇ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಲ್ಲದೆ ಯಲಹಂಕ ಹೋಬಳಿ ಆವಲಹಳ್ಳಿ ಗ್ರಾಮದ ಸರ್ವೇನಂಬರ್ 109 ರಲ್ಲಿನ 3 ಎಕರೆ 6 ಗುಂಟೆ ಜಮೀನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ಕೋರಿ ಅಂದಿನ ಸಿಎಂ ಯಡಿಯೂರಪ್ಪ ಅವರಿಗೆ ಅರ್ಜಿ ಸಲ್ಲಿಸಿದ್ದ ಆಶಾ ಪರ್ದೇಸಿ ಎಂಬ ಮಹಿಳೆಯ ಹೆಸರಿನಲ್ಲಿ ಜಮೀನು ಖಾತೆಯಿರಲಿಲ್ಲ. ಅರ್ಜಿಯಲ್ಲಿ ಆಕೆಯ ಸಹಿ ಹಾಗೂ ದಿನಾಂಕ ಕೂಡ ನಮೂದಾಗಿರಲಿಲ್ಲ. ಈ ಸೋ ಕಾಲ್ಡ್ ಅರ್ಜಿದಾರಳಾದ ಆಶಾ ಪರದೇಸಿ ಜಮೀನು ಪ್ರಕ್ರಿಯಿಂದ ಜಮೀನು ಕೈ ಬಿಟ್ಟ ಬಳಿಕ ತನ್ನ ಹೆಸರಿನಲ್ಲಿ ಖಾತೆ ಮಾಡಿಸಿಕೊಂಡು ಕೋಟ್ಯಾಂತರ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣದ ಬಗ್ಗೆ ತನಿಖೆ ನಡೆಯಬೇಕಿದ್ದು ತಡೆಯಾಜ್ಞೆ ನೀಡಬಾರದು ಎಂದು ಕೋರಿದರು.