ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ವನ್ನು ಸಂಘಟಿಸಿ, ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಿಲ್ಲೆ, ವಿಧಾನಸಭಾ ಕ್ಷೇತ್ರ ಮತ್ತು ವಲಯವಾರು ಸಮಿತಿ ರಚನೆ ಮಾಡಲು ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಗರದ ಡಿ.ದೇವರಾಜ ಅರಸು ಭವನದಲ್ಲಿ ಮಂಗಳವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಎನ್.ಮಹೇಶ್, ಈ ನಿರ್ಧಾರ ಘೋಷಿಸಿದರು. ಎರಡು ತಿಂಗಳಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ ಸಮಿತಿ ರಚಿಸಿ, ಸಮಿತಿಗೆ ಸದಸ್ಯರನ್ನು ನೇಮಕ ಮಾಡಲಾಗುವುದು.
ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬೇಕಾದ ಸಿದ್ಧತೆಯನ್ನು ಈಗಿಂದಲೇ ಮಾಡಲಿದ್ದೇವೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿದೆ. ಹಾಗಾಗಿ, ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುತ್ತಿದ್ದು, ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದಲೇ ಮಾಡುತ್ತಿದ್ದೇವೆ ಎಂದರು.
ಸದ್ಯ ರಚಿಸುವ ಸಮಿತಿಗಳಿಂದ ವರದಿ ತರಿಸಿಕೊಳ್ಳಲಾಗುವುದು. ವರದಿಯ ಆಧಾರದಲ್ಲಿ ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂಬುದನ್ನು ಪರಿಶೀಲಿಸಿ, ಅಂತಿಮವಾಗಿ ರಾಷ್ಟ್ರ ನಾಯಕರೊಡನೆ ಚರ್ಚೆ ನಡೆಸಲಿದ್ದೇವೆ. ಇದಾದ ನಂತರ ಅಭ್ಯರ್ಥಿಗಳ ಅಂತಿಮ ಆಯ್ಕೆ ನಡೆಯಲಿದೆ ಎಂದು ಹೇಳಿದರು.
ಬಹುಜನ ವಿದ್ಯಾರ್ಥಿ ಸಂಘಟನೆ (ಬಿವಿಎಸ್) ಬಿಎಸ್‌ಪಿಗೆ ಸೇರಿದ್ದು ಎಂಬ ತಪ್ಪು ಕಲ್ಪನೆಯಿದೆ. ಆದರೆ, ನಮ್ಮ ಪಕ್ಷಕ್ಕೂ ಆ ಸಂಘಟನೆಗೂ ಯಾವುದೇ ಸಂಬಂಧವಿಲ್ಲ. ವಿದ್ಯಾರ್ಥಿ ದಿಸೆಯಲ್ಲಿ ಬಿವಿಎಸ್‌ನಲ್ಲಿ ಗುರುತಿಸಿಕೊಂಡಿರುವವರು ಬಳಿಕ ಬಿಎಸ್‌ಪಿ ಪಕ್ಷಕ್ಕೆ ಸೇರಿದರೆ ಯಾವುದೇ ತಪ್ಪಿಲ್ಲ ಎಂದು ಮಹೇಶ್ ಹೇಳಿದರು.