Advertisement
ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ಗೆ, ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಲಾಭವಾಗಿತ್ತು. ಆದರೆ, ಇದೀಗ ಬಹುಜನ ಸಮಾಜ ಪಕ್ಷ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್‌ರನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಡಾ.ಸಿ.ಎಸ್.ದ್ವಾರಕನಾಥ್ ಅವರು ಕ್ಷೇತ್ರದ ಉದ್ದಗಲಕ್ಕೂ ಬಿರುಸಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಜೆಡಿಎಸ್‌ಗೆ ಬಿಸಿ ತುಪ್ಪವಾಗಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳು ಹೆಚ್ಚಿನ ಪ್ರಮಾಣದಲ್ಲಿವೆ. ಪ್ರತಿ ಚುನಾವಣೆಯಲ್ಲಿ ಗೆಲುವನ್ನು ನಿರ್ಣಯಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷ ಸ್ಪರ್ಧಿಸುತ್ತಿರುವುದು ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ರಾಜಕೀಯ ಲೆಕ್ಕಾಚಾರ ಕೂಡ ಶುರುವಾಗಿದೆ. ಕ್ಷೇತ್ರದ ರಾಜಕೀಯ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಇಲ್ಲಿ ಅಹಿಂದ ವರ್ಗದ ನಾಯಕರೇ ಹೆಚ್ಚು ಬಾರಿ ಗೆಲುವು ಸಾಧಿಸಿ, ಸಂಸತ್ತನ್ನು ಪ್ರವೇಶಿಸಿದ್ದಾರೆ. ಅದರಲ್ಲೂ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅಹಿಂದ ವರ್ಗದ ನಾಯಕರ ಕೈ ಹಿಡಿರುವುದು ಎದ್ದು ಕಾಣುತ್ತಿದೆ. ಹೀಗಾಗಿ, ಬಹುಜನ ಸಮಾಜ ಪಕ್ಷ ಇಲ್ಲಿನ ಅಹಿಂದ ವರ್ಗದ ಮತಗಳ ಮೇಲೆ ಕಣ್ಣಿಟ್ಟು, ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಅದರಲ್ಲೂ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಲಿಜ ಸಮುದಾಯಕ್ಕೆ ಸೇರಿದ ಡಾ.ಸಿ.ಎಸ್.ದ್ವಾರಕನಾಥ್‌ರನ್ನು ಕಣಕ್ಕೆ ಇಳಿಸುತ್ತಿದ್ದು, ಕೇವಲ ಅಂತಿಮ ಘೋಷಣೆಯಷ್ಟೆ ಬಾಕಿ ಉಳಿದಿದೆ.