ಹೊಸದಿಲ್ಲಿ : ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಗೆ ಸಡ್ಡು ಹೊಡೆಯುವ ರೀತಿಯಲ್ಲಿ ದೇಶದ ಅತೀ ದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 249 ರೂ.ಗೆ ಫ್ರೀ ಡಾಟಾ – ಫ್ರೀ ಕಾಲಿಂಗ್ ಪ್ಲಾನ್ ಪ್ರಕಟಿಸಿದೆ.
ಬಿಎಸ್‌ಎನ್‌ಎಲ್ ಈ ಅತ್ಯಾಕರ್ಷಕ ಪ್ಲಾನ್ ಮೂಲಕ ತನ್ನ ಗ್ರಾಹಕರಿಗೆ ತಿಂಗಳಿಗೆ 300 ಜಿಬಿ ಡಾಟಾ ಒದಗಿಸುತ್ತದೆ. ಕೇವಲ 249 ರೂ.ಗೆ ಇಷ್ಟು ದೊಡ್ಡ ಪ್ರಮಾಣದ ಡಾಟಾ ನೀಡುವ ಬಿಎಸ್‌ಎನ್‌ಎಲ್‌ನ ಗರಿಷ್ಠ ಆಫರ್ ಇದಾಗಿದೆ ಎಂದು ತಿಳಿಯಲಾಗಿದೆ.
ಆದರೆ ಈ ಕೊಡುಗೆ ಪ್ರಕಾರ ಗ್ರಾಹಕರಿಗೆ ಸಿಗುವುದು ರಾತ್ರಿ ಹೊತ್ತಿನ ಫ್ರೀ ಕಾಲಿಂಗ್ ಮಾತ್ರ. ಗಮನೀಯ ಅಂಶವೆಂದರೆ ಈ ಆಫರ್ ಇರುವುದು ಬಿಎಸ್‌ಎನ್‌ಎಲ್‌ನ ಹೊಸ ಗ್ರಾಹಕರಿಗೆ ಮಾತ್ರ.
ಬಿಎಸ್‌ಎನ್‌ಎಲ್ ವೆಬ್‌ಸೈಟ್ ಪ್ರಕಾರ 249 ರೂ.ಗಳ ಈ ಪ್ಲಾನ್ ಮುಂದಿನ 6 ತಿಂಗಳ ಅವಧಿಯದ್ದಾಗಿರುತ್ತದೆ. ವಿಚಿತ್ರವೆಂದರೆ ಈ ಪ್ಲಾನ್ ಮಾರ್ಚ್ ಅಂತ್ಯದ ವರೆಗೆ ಮಾತ್ರವೇ ಲಭ್ಯವಿತ್ತು. ಆದರೆ ಅದು ಈಗಲೂ ಚಾಲ್ತಿಯಲ್ಲಿರುವಂತಿದೆ. ಈ ಪ್ಲಾನ್ ಪಡೆದ ಗ್ರಾಹಕರು ಆರು ತಿಂಗಳ ನಂತರ ತಿಂಗಳಿಗೆ 499 ರೂ. ತೆತ್ತು ಆಫರ್‌ನಲ್ಲಿ ಮುಂದುವರಿಯಬಹುದಾಗಿದೆ.
ರಿಲಯನ್ಸ್ ಜಿಯೋ ಸದ್ಯದಲ್ಲೇ ಹೋಮ್ ಬ್ರಾಡ್ ಬ್ಯಾಂಡ್ ಸೇವೆ ಆರಂಭಿಸಲಿದ್ದು ಅದರ ಬಿಸಿ ಬಿಎಸ್‌ಎನ್‌ಎಲ್‌ಗೆ ಇನ್ನಷ್ಟು ತೀವ್ರವಾಗಿ ತಟ್ಟಲಿದೆ.
ಬಿಎಸ್‌ಎನ್‌ಎಲ್ ನ 249 ರೂ.ಗಳ ಪ್ಲಾನ್‌ಗೆ 2ಎಂಬಿಪಿಎಸ್ ಸ್ಪೀಡ್ ಲಿಮಿಟ್ ಇದೆ. ಈ ದೈನಂದಿನ ಪರಿಮಿತಿಯನ್ನು ತಲುಪಿದ ತತ್‌ಕ್ಷಣ ಡಾಟಾ ವೇಗ ಕಡಿಮೆಯಾಗುವುದೆಂದು ಬಿಎಸ್‌ಎನ್‌ಎಲ್ ಹೇಳಿದೆ.
ದಿನಕ್ಕೆ 10 ಜಿಬಿ ಡಾಟಾ ಸಿಗುವ ಬಿಎಸ್‌ಎನ್‌ಎಲ್‌ನ ಈ ಆಫರ್ ಯಾವುದೇ ಪ್ರಮುಖ ಟೆಲಿಕಾಂ ಕಂಪೆನಿ ಕೊಡುವ ಆಫರ್‌ಗಿಂತ ಅತ್ಯಂತ ಅಗ್ಗದ ಕೊಡುಗೆಯಾಗಿದೆ.