ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ವಿಲೀನ ಬಳಿಕ ಅವುಗಳನ್ನು ಉಳಿಸಲು ಸರಕಾರ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತಂದಿದ್ದು ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
ಇದರಿಂದ ಬಿಎಸ್‌ಎನ್‌ಎಲ್‌ನಲ್ಲಿ ಅರ್ಧದಷ್ಟು ಸಿಬಂದಿ ಕಡಿಮೆಯಾಗಲಿದ್ದಾರೆ.
ಬಿಎಸ್‌ಎನ್‌ಎಲ್‌ನಲ್ಲಿ 78300, ಎಂಟಿಎನ್‌ಎಲ್‌ನಲ್ಲಿ 14378 ಮಂದಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಲಿದ್ದಾರೆ. ಇದರಿಂದಾಗಿ ಒಟ್ಟು 92700 ಸಿಬಂದಿ ಕೆಲಸ ತ್ಯಜಿಸಲಿದ್ದು ಸಕಾರಕ್ಕೆ ವಾರ್ಷಿಕ 8800 ಕೋಟಿ ರೂ. ಉಳಿತಾಯವಾಗಲಿದೆ.
ಸ್ವಯಂ ನಿವೃತ್ತಿ ಯೋಜನೆ ಹೊರತಾಗಿ ಸುಮಾರು 6 ಸಾವಿರ ಮಂದಿ ನಿವೃತ್ತಿಯಾಗಿದ್ದಾರೆ. 82 ಸಾವಿರ ಮಂದಿ ಸ್ವಯಂ ನಿವೃತ್ತಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಪಿ.ಕೆ. ಪುರ್‌ವಾರ್ ಅವರು ಹೇಳಿದ್ದಾರೆ.
ಇದೇ ವೇಳೆ ಎಂಟಿಎನ್‌ಎಲ್‌ನಲ್ಲಿ ಉದ್ದೇಶಿತ ಗುರಿಗಿಂತ ಹೆಚ್ಚು ಮಂದಿ ನೌಕರರು ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದಾರೆ. 13650 ಗುರಿ ಇದ್ದು, 14378 ಮಂದಿ ಅರ್ಜಿ ಹಾಕಿದ್ದಾರೆ ಎಂದು ಎಂಟಿಎನ್‌ಎಲ್ ಅಧ್ಯಕ್ಷ ಸುನಿಲ್ ಕುಮಾರ್ ಅವರು ಹೇಳಿದ್ದಾರೆ. ಇದರಿಂದ ವಾರ್ಷಿಕ 2272 ಕೋಟಿ ರೂ.
ಉಳಿತಾಯವಾಗಲಿದ್ದು, ಸಂಬಳ ವೆಚ್ಚ 500 ಕೋಟಿ ರೂ.ಗಳಿಗೆ ಇಳಿಕೆ ಕಾಣಲಿದೆ. ಹಾಗೆಯೇ ಬಿಎಸ್‌ಎನ್‌ನಲ್ಲಿ ಸದ್ಯ ನೌಕರರ ಸಂಬಳ ವೆಚ್ಚ 14 ಸಾವಿರ ಕೋಟಿ ರೂ. ಇದ್ದು, ಮುಂದಿನ ದಿನಗಳಲ್ಲಿ ಈ ವೆಚ್ಚ 7 ಸಾವಿರ ಕೋಟಿ ರೂ.ಗಳಿಗೆ ಇಳಿಕೆಯಾಗಲಿದೆ. ಎರಡೂ ಕಂಪೆನಿಗಳ ಒಟ್ಟು ಸಾಲ ಸುಮಾರು 40 ಸಾವಿರ ಕೋಟಿ ರೂ. ಇದೆ.
ಟೆಲಿಕಾಂ ಕಂಪೆನಿಗಳ ಸಾಲದ ಹೊರೆ, ಖರ್ಚು ವೆಚ್ಚ ತಗ್ಗಿಸಲು ಸಿಬಂದಿ ಕಡಿತದ ಮೊರೆ ಹೋಗಲಾಗಿದ್ದು, ಇದಕ್ಕಾಗಿ ಕಳೆದ ನ.4ರಂದು ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸಲಾಗಿತ್ತು. ಇದಕ್ಕೆ ಬಿಎಸ್‌ಎನ್‌ಎಲ್‌ನಲ್ಲಿ ಸುಮಾರು 1 ಲಕ್ಷ ಸಿಬಂದಿ ಅರ್ಹರಾಗಿದ್ದು, ಎಂಟಿಎಲ್‌ಎನ್‌ನಲ್ಲಿ 16300 ಮಂದಿ ಅರ್ಹರಿದ್ದಾರೆ.