Advertisement

ಸಿಮ್‌ ಇಲ್ಲದೇ ಫೋನ್‌ ಮಾಡುವ ಸೌಲಭ್ಯ!

06:00 AM Jul 12, 2018 | Team Udayavani |

ನವದೆಹಲಿ: ಭಾರತದಲ್ಲಿ ಇನ್ನು ಯಾರಿಗೇ ಆದರೂ ಫೋನ್‌ ಮಾಡಲು ಸಿಮ್‌ ಇರಬೇಕೆಂದಿಲ್ಲ. ಇಂಟರ್‌ನೆಟ್‌ ಇದ್ದರೆ ಸಾಕು. ಇಂಥದ್ದೊಂದು ವಿಶಿಷ್ಟ ಸೇವೆಯನ್ನು ಇದೇ 25ರಿಂದ ಬಿಎಸ್‌ಎನ್‌ಎಲ್‌ ಆರಂಭಿಸುತ್ತಿದೆ. ಇದನ್ನು ಇಂಟರ್‌ನೆಟ್‌ ಟೆಲಿಫೊನಿ ಸೇವೆ ಎಂದು ಕರೆಯಲಾಗಿದ್ದು, ಮೊಬೈಲ್‌ ಅಪ್ಲಿಕೇಶನ್‌ ಮೂಲಕ ದೇಶದ ಯಾವುದೇ ಮೂಲೆಗೆ ಯಾವುದೇ ಮೊಬೈಲ್‌ ಅಥವಾ ಲ್ಯಾಂಡ್‌ಲೈನ್‌ಗೆ ಕರೆ ಮಾಡಬಹುದಾಗಿದೆ. ಇದಕ್ಕಾಗಿ ಬಿಎಸ್‌ಎನ್‌ಎಲ್‌ ವಿಂಗ್ಸ್‌ ಎಂಬ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದ್ದು, ಈ ಆ್ಯಪ್‌ ಬಳಸಿ ಇಂಟರ್‌ನೆಟ್‌ನಿಂದ ಕರೆ ಮಾಡಬಹುದು ಎಂದು ಟೆಲಿಕಾಂ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ. ಸದ್ಯ ಧ್ವನಿ ಕರೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

Advertisement

ನೋಂದಣಿ ಶೀಘ್ರದಲ್ಲೇ ಆರಂಭವಾಗಲಿದ್ದು, 25ರಿಂದ ಸೇವೆ ಶುರುವಾಗಲಿದೆ ಎಂದು ಬಿಎಸ್ಸೆನ್ನೆಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪಮ್‌ ಶ್ರೀವಾಸ್ತವ ಹೇಳಿದ್ದಾರೆ. ಕರೆ ಮಾಡಲು ಯಾವುದೇ ಟೆಲಿಕಾಂ ಪೂರೈಕೆದಾರರ ಇಂಟರ್‌ನೆಟ್‌ ಸೇವೆ ಬಳಸಬಹುದು. ಬಿಎಸ್‌ಎನ್‌ಎಲ್‌ ಒದಗಿಸುವ ಇಂಟರ್‌ನೆಟ್ಟೇ ಆಗಬೇಕೆಂಬ ಕಡ್ಡಾಯವಿಲ್ಲ. ಅಪ್ಲಿಕೇಶನ್‌ ನೋಂದಾಯಿ ಸುವಾಗ ಪ್ರತಿ ನೋಂದಣಿಗೂ ಸಿಮ್‌ಗೆ ನೀಡುವಂತೆಯೇ ಸಂಖ್ಯೆಯನ್ನು ನೀಡಲಾಗುತ್ತದೆ. ವಾರ್ಷಿಕ ಶುಲ್ಕ 1099 ರೂ. ನಿಗದಿಸಲಾಗಿದ್ದು, ಅನಿಯಮಿತ ಕರೆಗಳನ್ನು ಮಾಡಬಹುದು.

ನೆಟ್‌ ನ್ಯೂಟ್ರಾಲಿಟಿಗೆ ಆಯೋಗ ಒಪ್ಪಿಗೆ
ಇಂಟರ್‌ನೆಟ್‌ ಹಿಂದಿನಂತೆಯೇ ಯಾವುದೇ ಸೇವೆ ಪೂರೈಕೆದಾರ ಕಂಪನಿಯ ಅಂಕುಶವಿಲ್ಲದೆ ಲಭ್ಯವಾಗಲಿದೆ. ಈ ಸಂಬಂಧ ನೆಟ್‌ ನ್ಯೂಟ್ರಾಲಿಟಿಗೆ ಟೆಲಿಕಾಂ ಆಯೋಗ ಸಮ್ಮತಿ ವ್ಯಕ್ತಪಡಿಸಿದೆ. ಇಂಟರ್‌ನೆಟ್‌ ಸೇವೆ ಪೂರೈಕೆದಾರರು, ಸಾಮಾಜಿಕ ಮಾಧ್ಯಮ ಕಂಪನಿಗಳು ಸೇರಿದಂತೆ ಯಾವುದೇ ಕಂಪನಿಯು ಕಂಟೆಂಟ್‌ ಮತ್ತು ಇಂಟರ್‌ನೆಟ್‌ ವೇಗದ ಮೇಲೆ ನಿಯಂತ್ರಣ ಹೇರುವಂತಿಲ್ಲ. ಅಷ್ಟೇ ಅಲ್ಲ, ಕೆಲವೇ ವೆಬ್‌ಸೈಟ್‌ಗಳನ್ನು ಉಚಿತವಾಗಿ ಒದಗಿಸಿ, ಇತರ ಸೇವೆಗಳಿಗೆ ಶುಲ್ಕ ವಿಧಿಸುವಂತೆಯೂ ಇಲ್ಲ. ಈ ನಿಯಮ ಉಲ್ಲಂ ಸಿದರೆ ಕಠಿಣ ದಂಡ ವಿಧಿಸಲಾಗುತ್ತದೆ. ಬುಧವಾರ ಈ ಸಂಬಂಧ ವಿವಿಧ ಸಚಿವಾಲಯಗಳ ಟೆಲಿಕಾಂ ಸಮಿತಿ ಸಭೆ ಸೇರಿ ನೆಟ್‌ ನ್ಯೂಟ್ರಾಲಿಟಿಗೆ ಸಮ್ಮತಿ ವ್ಯಕ್ತಪಡಿಸಿವೆ. ತಕ್ಷಣದಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ಇಲಾಖೆ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next