ನಷ್ಟದಲ್ಲಿರುವ ಬಿಎಸ್ಎನ್ಎಲ್ನ ಪುನರುಜ್ಜೀವನಕ್ಕಾಗಿ ಕೇಂದ್ರ ಸರಕಾರ ಮತ್ತೂಂದು ಪ್ಯಾಕೇಜ್ ಘೋಷಣೆ ಮಾಡಿದೆ. ಈ ಬಾರಿ 89 ಸಾವಿರ ಕೋಟಿ ರೂ. ನೀಡುವುದಾಗಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವರ್ಷ ಘೋಷಣೆ ಮಾಡಿದ್ದ 1.64 ಲಕ್ಷ ಕೋಟಿ ರೂ. ಮೊತ್ತದ ಪುನರುಜ್ಜೀವನ
ಪ್ಯಾಕೇಜ್ನ್ನು ಹಂತವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಪ್ಯಾಕೇಜ್ನ ಪ್ರಮುಖ ಉದ್ದೇಶವೇ ಬಿಎಸ್ಎನ್ಎಲ್ ಅನ್ನು ಸದೃಢ ಟೆಲಿಕಾಂ ಸಂಸ್ಥೆ ಮಾಡುವುದು ಎಂಬುದು ಕೇಂದ್ರದ ಹೇಳಿಕೆ. ಹಾಗಾದರೆ ಸದ್ಯ ಬಿಎಸ್ಎನ್ಎಲ್ನ ಸ್ಥಿತಿಗತಿ ಏನು?
ಖಾಸಗಿಯವರ ಜತೆ ಸ್ಪರ್ಧೆ ಸಾಧ್ಯವೇ? ಇಲ್ಲಿದೆ ಮಾಹಿತಿ…
ಖಾಸಗಿ ವಲಯದ ಸ್ಪರ್ಧೆ ನಡುವೆ ಬಿಎಸ್ಎನ್ಎಲ್ ಮಂಕಾದಂತೆ ಕಾಣಿಸುತ್ತಿದೆ. ಜತೆಗೆ ಬೇರೆ ಕಂಪೆನಿಗಳು 4ಜಿ, 5ಜಿಕಡೆ ಹೋಗುತ್ತಿದ್ದರೆ,
Related Articles
ಬಿಎಸ್ಎನ್ಎಲ್ ಇನ್ನೂ 3ಜಿ, 4ಜಿ ನಡುವೆಯೇ ಒದ್ದಾಡುತ್ತಿತ್ತು. ಹೀಗಾಗಿ, ಸಾಂಪ್ರದಾಯಿಕವಾಗಿ ಬಳಕೆ ಮಾಡುತ್ತಿದ್ದವರೂ, ಬಿಎಸ್ಎನ್ಎಲ್ನಿಂದ ದೂರ ಸರಿ ಯುತ್ತಿದ್ದರು. ಅಲ್ಲದೆ ನಿಧಾನಗತಿಯಲ್ಲಿ ಬ್ರಾಡ್ಬ್ಯಾಂಡ್ನ ಸ್ಥಿತಿಯೂ ಹೀಗೇ ಆಯಿತು. ಇಲ್ಲಿಯೂ ಖಾಸಗಿಯವರಿಗೆ ಸ್ಪರ್ಧೆ ನೀಡುವುದು ಅಸಾಧ್ಯದ ಸ್ಥಿತಿ ಎಂಬಂತಾಗಿದೆ.
ಇನ್ನೊಂದೆಡೆ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅನ್ನು ಯಾವುದೇ ಕಾರಣಕ್ಕೂ ಮುಚ್ಚುವುದಕ್ಕೆ ಬಿಡಬಾರದು ಎಂಬ ಆಗ್ರಹವೂ ಕೇಳಿಬರುತ್ತಿತ್ತು. ಹೀಗಾಗಿ ಕೇಂದ್ರ ಸರಕಾರ 2019ರಿಂದಲೂ ಬಿಎಸ್ಎನ್ಎಲ್ನ ಪುನರುಜ್ಜೀವನಕ್ಕೆ ಪ್ರಯತ್ನ ಪಡುತ್ತಲೇ ಇದೆ.
ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರಕಾರ 89 ಸಾವಿರ ಕೋಟಿ ರೂ.ಗಳನ್ನು ಪುನರುಜ್ಜೀವನಕ್ಕಾಗಿ ನೀಡಲು ಒಪ್ಪಿಗೆ ನೀಡಿದೆ. ಆದರೆ ಇದು ಹೊಸ ಪುನರುಜ್ಜೀವನ ಯೋಜನೆಯೇನಲ್ಲ. 2022ರಲ್ಲಿ ಕೇಂದ್ರ ಸರಕಾರವೇ 1.64 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಅನ್ನು ಘೋಷಣೆ ಮಾಡಿತ್ತು. ಆದರೆ ಇದನ್ನು ಹಂತಹಂತವಾಗಿ ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿತ್ತು. ಈ ಯೋಜನೆಯ ಮೂಲಾಶಯವೇ, ಸಂಸ್ಥೆ ಮೇಲಿರುವ ಸಾಲದ ಹೊರೆಯನ್ನು ಕಡಿಮೆ ಮಾಡುವುದಾಗಿತ್ತು. ಇದಾದ ಬಳಿಕ 4ಜಿ ಮತ್ತು 5ಜಿ ಸ್ಪೆಕ್ಟ್ರಂ ಅನ್ನು ಖರೀದಿಗೆ ಉಳಿದ ಹಣ ಬಳಸಿಕೊಳ್ಳುವುದು ಯೋಜನೆಯ ಮೂಲ ಸಾರವಾಗಿದೆ.
ಪುನರುಜ್ಜೀವನಕ್ಕೆ 3 ಕಾರಣಗಳು
1 ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಮಾತ್ರ ಕೆಲಸ ಮಾಡುತ್ತಿದೆ. ಅಲ್ಲದೆ ಡಿಜಿಟಲ್ ಇಂಡಿಯಾ ನೆರವೇರಿಸಲು ಮತ್ತು ಸರಕಾರದ ಕಚೇರಿಗಳು ವ್ಯವಸ್ಥಿತವಾಗಿ ಕೆಲಸ ಮಾಡಲು ಪ್ರತಿಯೊಂದು ಗ್ರಾಮಗಳಲ್ಲಿಯೂ ಬ್ರಾಡ್ಬ್ಯಾಂಡ್ ಬೇಕೇಬೇಕು. ಜತೆಗೆ ಇಂದಿಗೂ ಶೇ.36ರಷ್ಟು ಬಿಎಸ್ಎನ್ಎಲ್ ಆಪ್ಟಿಕಲ್ ಫೈಬರ್ ಗ್ರಾಹಕರು ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳಿಗೆ ಬಿಎಸ್ಎನ್ಎಲ್ ಅನ್ನು ವಿಸ್ತರಿಸುವ ಕೆಲಸವಾಗಬೇಕು. ಕಡಿಮೆ ಆದಾಯದ ಗ್ರಾಹಕರಿಗೂ ಇಂಟರ್ನೆಟ್ ಸೇವೆ ಸಿಗುವಂತಾಗಲು ಬಿಎಸ್ಎನ್ಎಲ್ ಬೇಕೇಬೇಕು.
2 ಬಿಎಸ್ಎನ್ಎಲ್ ದೇಶೀಯವಾಗಿ ತಯಾರಾದ ದೂರಸಂಪರ್ಕ ಸಲಕರಣೆಗಳನ್ನು ಈಗಲೂ ಬಳಕೆ ಮಾಡುತ್ತಿದೆ. ಆದರೆ ಖಾಸಗಿಯವರು ವಿದೇಶಿ ಸಂಸ್ಥೆಗಳನ್ನು ನೆಚ್ಚಿಕೊಂಡಿದ್ದಾರೆ. ಈಗಾಗಲೇ 4ಜಿ ಆರಂಭಿಸಿರುವ ಬಿಎಸ್ಎನ್ಎಲ್ ಮುಂದಿನ ದಿನಗಳಲ್ಲಿ 5ಜಿ ಸೇವೆ ಆರಂಭಿಸಲಿದೆ. ಆಗ ದೇಶೀಯ ಉತ್ಪಾದಕರಿಗೆ ಹೆಚ್ಚಿನ ಪ್ರಮಾಣದ ಆದ್ಯತೆ ಸಿಗಲಿದೆ. ಅಲ್ಲದೆ ಚೀನ ಮೂಲಕ ಕಂಪೆನಿಗಳನ್ನು ಹೊರಗಿಡಬಹುದಾಗಿದೆ.
3 ಗಡಿ ಪ್ರದೇಶಗಳು ಮತ್ತು ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ದೂರಸಂಪರ್ಕ ಯೋಜನೆ ನೀಡಲು ಬಿಎಸ್ಎನ್ಎಲ್ ಅನ್ನು ಮಾತ್ರ ಬಳಕೆ ಮಾಡಿಕೊಳ್ಳಬಹುದು. ಇಂಥ ಸ್ಥಳಗಳಿಗೆ ಖಾಸಗಿ ವಲಯದ ಕಂಪೆನಿಗಳು ಪ್ರವೇಶ ಮಾಡುವ ಸಾಧ್ಯತೆಗಳು ಕಡಿಮೆ. ಇದಕ್ಕೆ ಆರ್ಥಿಕವಾಗಿಯೂ ಅವುಗಳಿಗೆ ನಷ್ಟವುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಬಿಎಸ್ಎನ್ಎಲ್ ಇಲ್ಲಿಯೂ ಸಂಪರ್ಕ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಹಿಂದೆ ನೀಡಲಾದ ಪ್ಯಾಕೇಜ್
2019ರಲ್ಲಿ ಕೇಂದ್ರ ಸರಕಾರ 70 ಸಾವಿರ ಕೋಟಿ ರೂ. ಮೊತ್ತದ ಪುನರುಜ್ಜೀವನ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದನ್ನು ಪ್ರಮುಖವಾಗಿ ಸಾಲ ತೀರಿಸಲು ಬಳಕೆ ಮಾಡಲಾಗಿತ್ತು. ಅಲ್ಲದೆ ಸಿಬಂದಿಯ ವಿಆರ್ಎಸ್ಗೆ ಬೇಕಾದ ಹಣವನ್ನೂ ಇದರಿಂದಲೇ ಪೂರೈಸಲಾಗಿತ್ತು.2022ರಲ್ಲಿ 1.64 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಇದನ್ನು 4ಜಿ ಸ್ಪೆಕ್ಟ್ರಂ ಖರೀದಿ, ಸಾಲ ತೀರಿಸುವಿಕೆ ಮತ್ತು ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ನೀಡಲು ಬೇಕಾದ ಉಪಕರಣಗಳ ವೆಚ್ಚಕ್ಕೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿತ್ತು.
ಬಿಎಸ್ಎನ್ಎಲ್ ಕಾರ್ಯಕ್ಷಮತೆ ಹೇಗಿದೆ?
2019ರಲ್ಲಿ ವಿಆರ್ಎಸ್ ಯೋಜನೆ ಘೋಷಿಸುವ ಮೊದಲು ಸಂಸ್ಥೆಯು 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿತ್ತು. ಇದರಲ್ಲಿ ಸುಮಾರು 78,000 ಮಂದಿ ವಿಆರ್ಎಸ್ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಕೆ ಮಾಡಿದ್ದರು. ಜೂನ್ 2021ರ ಹೊತ್ತಿಗೆ ಉದ್ಯೋಗಿಗಳ ಸಂಖ್ಯೆ 64,000 ಆಗಿತ್ತು.
ವಿಶೇಷವೆಂದರೆ 2016ರ ಹಣಕಾಸು ವರ್ಷದಲ್ಲಿ ಬಿಎಸ್ಎನ್ಎಲ್ ತನ್ನ ಆದಾಯದ ಶೇ.50ರಷ್ಟನ್ನು ಉದ್ಯೋಗಿಗಳಿಗಾಗಿ ವ್ಯಯಿಸಿತ್ತು. ಇದು 2021ರ ಹಣಕಾಸು ವರ್ಷದಲ್ಲಿ ಶೇ.36ಕ್ಕೆ ಇಳಿದಿದೆ.
ನಷ್ಟಕ್ಕೀಡಾಗಲು ಕಾರಣವೇನು?
1990ರ ದಶಕದ ಉತ್ತರಾರ್ಧದಲ್ಲಿ ಖಾಸಗಿ ಆಪರೇಟರ್ಗಳು ಮೊಬೈಲ್ ಸೇವೆಗಳನ್ನು ನೀಡಲು ಪ್ರಾರಂಭಿಸಿದ್ದರು. ಆದರೆ, ಬಿಎಸ್ಎನ್ಎಲ್ ಮೊಬೈಲ್ ಸೇವೆ ಆರಂಭಿಸಿದ್ದು 2002ರಲ್ಲಿ. ಜತೆಗೆ, ಏರ್ಟೆಲ್, ವೋಡಾಫೋನ್, ಐಡಿಯಾ, ಜಿಯೋದಂಥ ಕಂಪೆನಿಗಳು ಎಲ್ಲರಿಗೂ ಮೊದಲೇ 2ಜಿಯಿಂದ 3ಜಿಗೆ, 3ಜಿಯಿಂದ 4ಜಿಗೆ, 4ಜಿಯಿಂದ 5ಜಿಗೆ ಬದಲಾವಣೆಗೊಂಡರೂ, ಬಿಎಸ್ಎನ್ಎಲ್ ಮಾತ್ರ ಈ ಮಾರ್ಪಾಡಿಗೆ ಬಹಳಷ್ಟು ದಿನ ಕಾಯಬೇಕಾಯಿತು. ಈಗ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಚಾಲ್ತಿಯಲ್ಲಿದ್ದರೆ, ಬಿಎಲ್ಎನ್ಎಲ್ 4ಜಿ ತಲುಪಿಸಲು ಒದ್ದಾಡುತ್ತಿರುವ ಸನ್ನಿವೇಶವಿದೆ.
ಹೀಗಾಗಿಯೇ ಬಿಎಸ್ಎನ್ಎಲ್ ನಷ್ಟ ಆರಂಭವಾಗಿದ್ದೇ 2009-10ರ ಆರ್ಥಿಕ ವರ್ಷದಲ್ಲಿ. ಆ ವರ್ಷ 1,822 ಕೋಟಿ ರೂ. ನಷ್ಟವಾಗಿತ್ತು. ಅತೀ ಹೆಚ್ಚು ನಷ್ಟ ಕಂಡಿದ್ದು 2019 ಮತ್ತು 2020ರ ಆರ್ಥಿಕ ವರ್ಷದಲ್ಲಿ. 2019ರಲ್ಲಿ 14 ಸಾವಿರ ಕೋಟಿ, 2020ರಲ್ಲಿ 19 ಸಾವಿರ ಕೋಟಿ ರೂ. ನಷ್ಟವಾಗಿತ್ತು.
ಸ್ಪರ್ಧೆ ಹೆಚ್ಚು: ನ್ಯಾಶನಲ್ ಇನ್ವೆಸ್ಟ್ಮೆಂಟ್ ಪ್ರಮೋಶನ್ ಆ್ಯಂಡ್ ಫೆಸಿಲಿಟೇಶನ್ ಏಜೆನ್ಸಿ ಪ್ರಕಾರ, ಭಾರತದ ಟೆಲಿಕಾಂ ವಿಶ್ವದ ಎರಡನೇ ಅತೀದೊಡ್ಡ ಉದ್ಯಮವಾಗಿದೆ. ದೇಶದ ಒಟ್ಟಾರೆ ಟೆಲಿ-ಸಾಂದ್ರತೆ ಶೇ.84.88 ಆಗಿದೆ. ಆದಾಗ್ಯೂ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ದೊಡ್ಡ ವಿಭಜನೆ ಇದೆ. ನಗರ ಮಾರುಕಟ್ಟೆಯ ಟೆಲಿ-ಸಾಂದ್ರತೆಯು ಶೇ.134.70ರಷ್ಟಿದ್ದರೆ, ಗ್ರಾಮೀಣ ಮಾರುಕಟ್ಟೆಯು ಸುಮಾರು ಶೇ.58.2ರಷ್ಟಿದೆ. ಆದಾಗ್ಯೂ ಮೇ ಅಂತ್ಯದ ವೇಳೆಗೆ, ಬಿಎಸ್ಎನ್ಎಲ್ಗೆ ಹೋಲಿಸಿದರೆ ರಿಲಯ®Õ… ಜಿಯೋ ಮತ್ತು ಭಾರ್ತಿ ಏರ್ಟೆಲ್ ಎರಡೂ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 5 ಪಟ್ಟು ಹೆಚ್ಚು ಚಂದಾದಾರರನ್ನು ಹೊಂದಿದ್ದವು.