ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳ ಹೊಡೆತಕ್ಕೆ ಸಿಲುಕಿ, ನಷ್ಟದ ಹಾದಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಕಡೆಗೂ ಎಚ್ಚೆತ್ತುಕೊಂಡಿದ್ದು 4G ಸೇವೆ ಆರಂಭಿಸಿದೆ. ಉಳಿದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್ ಟೇಲ್, ಜಿಯೋ, ವೊಡಾಫೋನ್, ಐಡಿಯಾ ಮುಂತಾದವು ಈಗಾಗಲೇ 4G ನೆಟ್ವರ್ಕ್ ಸೇವೆಯನ್ನು ಒದಗಿಸುತ್ತಿದೆ.
ಆದರೇ ಖಾಸಗಿ ಸಂಸ್ಥೆಗಳಲ್ಲಿ 4ಜಿ ಸೇವೆ ಬಂದು ವರ್ಷಗಳುರುಳಿದರೂ ಬಿಎಸ್ ಎನ್ ಎಲ್ ಮಾತ್ರ 3G ಯಲ್ಲೇ ಉಳಿದಿತ್ತು. ಇದೀಗ 4G ಸೇವೆ ಆರಂಭಗೊಂಡಿದ್ದು ಗ್ರಾಹಕರಿಗೆ ಸಂತಸದ ವಿಷಯ ತಿಳಿಸಿದೆ. 4G ಸೇವೆಯ ಜೊತೆಗೆ ಬಂಪರ್ ಕೊಡುಗೆಯನ್ನು ನೀಡಿದ್ದು 4G ಪ್ರಿಪೇಡ್ ಪ್ಲ್ಯಾನ್ ಗಳನ್ನು ಕೂಡ ಪರಿಸಚಯಿಸಿದೆ. ಆರಂಭಿಕ ಹಂತದಲ್ಲಿ 5 ಟೆಲಿಕಾಂ ಸರ್ಕಲ್ ವ್ಯಾಪ್ತಿಗಳಲ್ಲಿ 4ಜಿ ಸೇವೆ ದೊರಕಲಿದ್ದು 2020 ರ ಮಾರ್ಚ್ ವೇಳೆ ದೇಶದ ಎಲ್ಲಾ ಭಾಗಗಳಲ್ಲೂ 4G ಸೇವೆ ಬರಲಿದೆ.
ಬಿ ಎಸ್ ಎನ್ ಎಲ್ ಇದೀಗ ಕೊಲ್ಕತ್ತಾದ ಬಾರಾ ಬಜಾರ್, ಹೋಲಿ ಬ್ರಿಡ್ಜ್ ಸೇರಿದಂತೆ ಕೆಲವು ಭಾಗಗಳಲ್ಲಿ 4G ಸೇವೆ ನೀಡುತ್ತಿದೆ. ಹಲವು ಭಾಗಗಳಲ್ಲಿ ಇನ್ನು ಟೆಸ್ಟಿಂಗ್ ಹಂತದಲ್ಲಿದೆ. ಇದೇ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಲೈವ್ ಆಗಲಿದೆ ಎಂದು ತಿಳಿದುಬಂದಿದೆ.
ಪ್ರಮುಖವಾದ ವಿಷಯವೆಂದರೇ ಬಿಎಸ್ ಎನ್ ಎಲ್ ಗ್ರಾಹಕರು ಶೀಘ್ರದಲ್ಲಿ 4G ಸಿಮ್ ಗೆ ಅಪ್‌ಗ್ರೇಡ್ ಆಗಬೇಕಾಗುತ್ತದೆ. ಸದ್ಯ ಕೊಲ್ಕತ್ತಾದಲ್ಲಿ ಬಿಎಸ್ ಎನ್ ಎಲ್ 4G ಸೇವೆಯು 17.9 Mbps ವೇಗದಲ್ಲಿ ಕಂಡುಬಂದಿದೆ ಎಂದು ಕೆಲವು ಬಳಕೆದಾರರು ತಿಳಿಸಿದ್ದಾರೆ.
4G ಸೇವೆಯ ಬೆನ್ನಲೇ ಬಿಎಸ್ ಎನ್ ಎಲ್ ಎರಡು ಹೊಸ 4G ಪ್ರೀಪೇಡ್ ಪ್ಲ್ಯಾನ್ ಗಳನ್ನು ಸಹ ಬಿಡುಗಡೆ ಮಾಡಿದೆ. ಅವುಗಳಲ್ಲಿ ಆರಂಭಿಕ 4G ಪ್ಲ್ಯಾನ್ ಬೆಲೆಯು 96 ರೂ.ಗಳಾಗಿದ್ದು, 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಮತ್ತೊಂದು ಪ್ಲ್ಯಾನ್ 236 ರೂ. ಬೆಲೆಯನ್ನು ಹೊಂದಿದ್ದು 84 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿವೆ. ಈ ಎರಡು ಪ್ಲ್ಯಾನ್ ಗಳು ಪೂರ್ಣ ವ್ಯಾಲಿಡಿಟಿ ಅವಧಿಗೆ 10GB ಡಾಟಾ ಸೌಲಭ್ಯವನ್ನು ನೀಡುತ್ತವೆ.
ಹಾಗೆಯೇ ಕೇರಳ, ಕರ್ನಾಟಕ, ಚೆನೈ, ಮಧ್ಯಪ್ರದೇಶ, ಗುಜರಾತ್ , ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಸಹ ಬಿಎಸ್ ಎನ್ ಎಲ್ 4G ನೆಟವರ್ಕ್ ಸೇವೆ ಪ್ರಾಯೋಗಿಕ ಹಂತದಲ್ಲಿದೆ. ಮುಂಬರುವ 2020ರ ಮಾರ್ಚ್ ವೇಳೆಗೆ ದೇಶದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಯೊಳಗೆ ಬಿಎಸ್ ಎನ್ ಎಲ್ 4G ಸೇವೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿವೆ.