ಹೊಸದಿಲ್ಲಿ /ಜಮ್ಮು: ಪಾಕಿಸ್ಥಾನ ಮತ್ತೂಮ್ಮೆ ತನ್ನ ಪೈಶಾಚಿಕ ಕೃತ್ಯವನ್ನು ಗಡಿಯಲ್ಲಿ ಮೆರೆದಿದೆ. ಮಂಗಳವಾರ ನಾಪತ್ತೆಯಾಗಿದ್ದ ಬಿಎಸ್‌ಎಫ್ ಯೋಧ ನರೇಂದ್ರ ಕುಮಾರ್‌ರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಪೈಶಾಚಿಕತೆಯ ಪರಾಕಾಷ್ಟೆ ಎಷ್ಟಿತ್ತು ಎಂದರೆ ಪಾಕ್ ಸೇನೆ ಅವರ ಕಣ್ಣುಗಳನ್ನೂ ಚುಚ್ಚಿ ತೆಗೆದಿದ್ದಾರೆ. ಜತೆಗೆ ಅವರಿಗೆ 3 ಬಾರಿ ಗುಂಡು ಹಾರಿಸಿದ್ದಾರೆ. ಜಮ್ಮು ಕಾಶ್ಮೀರದ ರಾಮಗಢ ಪ್ರದೇಶದ ಗಡಿ ಭಾಗದಲ್ಲಿ ಈ ಘಟನೆ ನಡೆದಿದ್ದು, ಇದೀಗ ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣಾ ರೇಖೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಇದೇ ರೀತಿಯ ಕೃತ್ಯವನ್ನು ಕಳೆದ ಮೇನಲ್ಲೂ ಪಾಕಿಸ್ಥಾನದ ಗಡಿ ಭದ್ರತಾ ತಂಡ (ಬಿಎಟಿ) ನಡೆಸಿತ್ತು. ಇಬ್ಬರು ಯೋಧರನ್ನು ಹತ್ಯೆಗೈದು, ಅವರ ದೇಹವನ್ನು ಗುರುತು ಸಿಗದಂತೆ ವಿರೂಪಗೊಳಿಸಿತ್ತು. ಈ ಕೃತ್ಯದಲ್ಲೂ ಬಿಎಟಿ ಕೈವಾಡ ಇದೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಗೌಪ್ಯ ಮಾಹಿತಿಗಳನ್ನುಳ್ಳ ವರದಿಯನ್ನು ಸೇನೆಯು ಗೃಹ ಸಚಿವಾಲಯಕ್ಕೆ ರವಾನಿಸಿದೆ.
ಶೋಧ ನಡೆದದ್ದು ಹೇಗೆ?: ಯೋಧ ನರೇಂದ್ರ ಕುಮಾರ್ ದೇಹದಲ್ಲಿ ಮೂರು ಗುಂಡುಗಳು ಹೊಕ್ಕಿರುವುದು ಕಂಡು ಬಂದಿದೆ. ಜತೆಗೆ ಗಂಟಲನ್ನು ಸೀಳಲಾಗಿತ್ತು. ಎರಡು ಕಣ್ಣುಗಳನ್ನೂ ಕಿತ್ತು ಹಾಕಲಾಗಿದೆ. ರಾಮಗಡ ಪ್ರದೇಶದಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ತಲೆ ಎತ್ತರಕ್ಕೆ ಹುಲ್ಲು ಬೆಳೆದಿದ್ದರಿಂದ ಇದನ್ನು ಕತ್ತರಿಸಲು ಬಿಎಸ್‌ಎಫ್ ಪಡೆ ಸಾಗಿತ್ತು. ಈ ವೇಳೆ ಪಾಕಿಸ್ಥಾನದ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಆಗಾಗ್ಗೆ ಗಡಿಯಾಚೆಗಿನ ಪ್ರದೇಶ ಸ್ಪಷ್ಟವಾಗಿ ಕಾಣಿಸುವಂತಾಗಲಿ ಎಂದು ಹುಲ್ಲುಗಳನ್ನು ಕತ್ತರಿಸಲಾಗುತ್ತದೆ. ಇದೇ ಭಾಗದಲ್ಲಿ ಗಡಿಯಾಚೆಗೆ, ರಕ್ಷಣಾತ್ಮಕ ಬದುಗಳಿರುವು ದರಿಂದ ಪಾಕಿಸ್ಥಾನಕ್ಕೆ ಹೆಚ್ಚು ಮಹತ್ವದ್ದಾಗಿದೆ.
ಪಾಕಿಸ್ಥಾನದ ಕಡೆಯಿಂದ ಅಪ್ರಚೋದಿತ ದಾಳಿ ನಡೆಯುತ್ತಿದ್ದಂತೆಯೇ, ಭಾರತದ ಯೋಧರೂ ಪ್ರತಿ ದಾಳಿ ನಡೆಸಿದ್ದಾರೆ. ಆದರೆ ದಾಳಿಯ ನಂತರದಲ್ಲಿ ಗುಂಪಿನ ಓರ್ವ ಸದಸ್ಯ ನಾಪತ್ತೆಯಾಗಿರುವುದು ತಿಳಿದುಬಂದಿದೆ. ನಂತರ ಇಡೀ ಪ್ರದೇಶದಲ್ಲಿ ಹುಡುಕಾಟ ಆರಂಭಿಸಲಾಗಿತ್ತು. ಗಡಿ ಮತ್ತು ಬೇಲಿಯ ಮಧ್ಯದಲ್ಲಿ ಒಂದಷ್ಟು ಸ್ಥಳವಿದ್ದು, ಇಲ್ಲಿ ಭಾರಿ ಎತ್ತರಕ್ಕೆ ಹುಲ್ಲು ಬೆಳೆದಿದೆ. ಹೀಗಾಗಿ ಈ ಹುಲ್ಲಿನ ಮಧ್ಯೆ ಹುಡುಕಾಟಕ್ಕೆ ಸಮಯ ತೆಗೆದುಕೊಂಡಿದೆ. ಇದೇ ಪ್ರದೇಶದಲ್ಲಿ ಯೋಧನ ಶವ ಸಿಕ್ಕಿದೆ. ಸುಮಾರು 9 ಗಂಟೆಗಳವರೆಗೆ ಶೋಧ ನಡೆದಿದೆ.
ನೆವ ಹೇಳಿದ ಪಾಕ್: ಶೋಧ ಕಾರ್ಯಾಚರನೆಯ ವೇಳೆ ಪಾಕಿಸ್ಥಾನ ಸೇನೆಯ ಜೊತೆಗೆ ದೂರವಾಣಿ ಕರೆಗಳು ಹಾಗೂ ಇತರ ಸಂವಹನ ವಿಧಾನಗಳನ್ನು ಬಳಸಿಕೊಳ್ಳ ಲಾಗಿತ್ತು. ಪಾಕ್ ಯೋಧರನ್ನೂ ಶೋಧ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಆಹ್ವಾನಿಸಲಾಗಿತ್ತು. ಆದರೆ ಶೋಧ ಕಾರ್ಯಾಚರಣೆಯ ಕೊನೆಯ ಹಂತದಲ್ಲಷ್ಟೇ ಪಾಕ್ ಯೋಧರು ಭಾಗವಹಿಸಿದ್ದು, ದಾರಿ ಮಧ್ಯೆ ಪ್ರವಾಹ ಬಂದಿತ್ತು. ಹೀಗಾಗಿ ತಡವಾಯಿತು ಎಂದು ನೆವ ಹೇಳಿದ್ದಾರೆ. ಯೋಧನ ಶವ ಸಿಕ್ಕ ತಕ್ಷಣ ಸಂಜೆಯಾದರೂ ಶವವನ್ನು ವಾಪಸ್ ಕರೆತರುವ ಅಪಾಯಕರ ಸಾಹಸವನ್ನು ಬಿಎಸ್‌ಎಫ್ ಮಾಡಿದೆ.
ಸರಕಾರ ಗಂಭೀರ: ಈ ಘಟನೆಯನ್ನು ಸರಕಾರ ಗಂಭೀರ ಎಂದು ಪರಿಗಣಿಸಿದೆ. ಅಲ್ಲದೆ ಪಾಕ್ ಅಧಿಕಾರಿಗಳೊಂದಿಗೂ ಈ ವಿಚಾರವನ್ನು ವಿದೇಶಾಂಗ ಸಚಿವಾಲಯ ಹಾಗೂ ಡಿಜಿಎಂಒ ಕೈಗೆತ್ತಿಕೊಳ್ಳಲಿದೆ.
ಬಿಎಸ್‌ಎಫ್ ಯೋಧನ ಬಂಧನ
ಲಕ್ನೋ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಅಚ್ಯುತಾನಂದ ಮಿಶ್ರಾ ಎಂಬ ಬಿಎಸ್‌ಎಫ್ ಯೋಧನನ್ನು ಪಾಕಿಸ್ಥಾನದ ಗುಪ್ತಚರ ದಳ ಐಎಸ್‌ಐ ಹನಿಟ್ರ್ಯಾಪ್ ಮಾಡಿದ್ದು, ಯೋಧನನ್ನು ಈಗ ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ ಬಂಧಿಸಿದೆ. ಪೊಲೀಸ್ ಅಕಾಡೆಮಿ ಮತ್ತು ತರಬೇತಿ ಕೇಂದ್ರದ ವಿವರಗಳನ್ನು ನೀಡುವಂತೆ ಮಿಶ್ರಾಗೆ ಸೂಚಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಕ್ಷಣಾ ವಿಭಾಗದ ಪತ್ರಕರ್ತೆ ಎಂದು ಹೇಳಿಕೊಳ್ಳುವ ಮಹಿಳೆಯೊಬ್ಬಳು ಮಿಶ್ರಾರನ್ನು ಸಂಪರ್ಕಿಸಿದ್ದಳು. ಈಕೆಯ ಜೊತೆಗೆ ಮಿಶ್ರಾ 2016 ರಿಂದಲೂ ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದರು ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.