Advertisement

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

01:25 PM Dec 01, 2024 | Team Udayavani |

ಡಿಸೆಂಬರ್ 1ನ್ನು ಭಾರತದಲ್ಲಿ ಗಡಿ ಭದ್ರತಾ ಪಡೆಯ (ಬಾರ್ಡರ್ ಸೆಕ್ಯುರಿಟಿ ಫೋರ್ಸ್   ಬಿಎಸ್ಎಫ್) ದಿನಾಚರಣೆ ಎಂದು ಆಚರಿಸಲಾಗುತ್ತದೆ. ಭಾರತದ ಗಡಿಗಳಲ್ಲಿ ದೇಶ ರಕ್ಷಣೆಗಾಗಿ ನಿರಂತರವಾಗಿ ಕಾರ್ಯಾಚರಿಸುವ ವೀರ ಪುರುಷ ಮತ್ತು ಮಹಿಳಾ ಯೋಧರನ್ನು ಗೌರವಿಸುವ ಸಲುವಾಗಿ ಈ ಬಿಎಸ್ಎಫ್ ದಿನವನ್ನು ಜಾರಿಗೆ ತರಲಾಯಿತು. 1965ರಲ್ಲಿ, ಬಿಎಸ್ಎಫ್ ಸ್ಥಾಪನೆಯಾದ ಬಳಿಕ, ಬಿಎಸ್ಎಫ್ ಜಗತ್ತಿನ ಅತಿದೊಡ್ಡ ಗಡಿ ಭದ್ರತಾ ಪಡೆಯಾಗಿ ಹೊರಹೊಮ್ಮಿದೆ. ಇಂದು ಬಿಎಸ್ಎಫ್ 2.65 ಲಕ್ಷ ಯೋಧರನ್ನು ಹೊಂದಿದೆ. ಬಿಎಸ್ಎಫ್ ದಿನಾಚರಣೆ ದೇಶದ ಭಧ್ರತೆಯಲ್ಲಿ ಬಿಎಸ್ಎಫ್ ಪಾತ್ರ, ಅದರ ಇತ್ತೀಚಿನ ಬೆಳವಣಿಗೆಗಳು, ದೇಶದ ಭದ್ರತೆಯ ಕುರಿತು ಬಿಎಸ್ಎಫ್ ಯೋಧರ ಬದ್ಧತೆಗಳನ್ನು ಜನತೆಗೆ ಸಾರುತ್ತದೆ.

Advertisement

ಬಿಎಸ್ಎಫ್ ಇತಿಹಾಸ

ವಿವಿಧ ಪ್ರದೇಶಗಳಲ್ಲಿ ತಲೆದೋರಿದ ಸಶಸ್ತ್ರ ದಾಳಿಗಳನ್ನು, ಅದರಲ್ಲೂ 1965ರಲ್ಲಿ ಕಛ್‌ನಲ್ಲಿರುವ ಸರ್ದಾರ್ ಪೋಸ್ಟ್, ಛಾರ್ ಬೆಟ್, ಹಾಗೂ ಬೇರಿಯಾ ಬೆಟ್‌ಗಳಲ್ಲಿ ಉಂಟಾದ ಸಶಸ್ತ್ರ ದಾಳಿಗಳನ್ನು ಎದುರಿಸಲು ರಾಜ್ಯ ಪೊಲೀಸ್ ಪಡೆಗಳು ವಿಫಲವಾದ ಬಳಿಕ, ಭಾರತೀಯ ಗಡಿ ಭದ್ರತಾ ಪಡೆಯನ್ನು (ಬಾರ್ಡರ್ ಸೆಕ್ಯುರಿಟಿ ಫೋರ್ಸ್   ಬಿಎಸ್ಎಫ್) ಸ್ಥಾಪಿಸಲಾಯಿತು.

ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಜೊತೆಗಿನ ಭಾರತದ ಗಡಿಯನ್ನು ಸುರಕ್ಷಿತವಾಗಿಸಲು ಒಂದು ಕೇಂದ್ರೀಯ ನಿಯಂತ್ರಣದ ಪಡೆಯ ಅವಶ್ಯಕತೆ ಇದೆ ಎಂದು ಮನಗಂಡು, ಡಿಸೆಂಬರ್ 1, 1965ರಂದು ಬಿಎಸ್ಎಫ್ ಅನ್ನು ಸ್ಥಾಪಿಸಲಾಯಿತು. ಆರಂಭವಾದಾಗ ಬಿಎಸ್ಎಫ್ 25 ಬಟಾಲಿಯನ್‌ಗಳನ್ನು ಹೊಂದಿತ್ತು. ಆ ಬಳಿಕದ ವರ್ಷಗಳಲ್ಲಿ ಬಿಎಸ್ಎಫ್ ಅಸಾಧಾರಣವಾಗಿ ಬೆಳೆದಿದ್ದು, ಇಂದು 192 ಬಟಾಲಿಯನ್‌ಗಳನ್ನು ಹೊಂದಿ, 6,386 ಕಿಲೋಮೀಟರ್‌ಗಳಿಗೂ ಹೆಚ್ಚು ವ್ಯಾಪ್ತಿಯ ಭಾರತದ ಅಂತಾರಾಷ್ಟ್ರೀಯ ಗಡಿಗಳನ್ನು ರಕ್ಷಿಸುತ್ತಿದೆ.

Advertisement

ಬಿಎಸ್ಎಫ್‌ನ ಪಾತ್ರ ಮತ್ತು ಜವಾಬ್ದಾರಿಗಳು

ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಜೊತೆಗಿನ ಭಾರತದ ಅಂತಾರಾಷ್ಟ್ರೀಯ ಗಡಿಗಳನ್ನು ಕಾಯುವ ಜವಾಬ್ದಾರಿ ಹೊಂದಿದೆ. ಆ ಮೂಲಕ, ಈ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬಿಎಸ್ಎಫ್ ಅತಿಮುಖ್ಯ ಪಾತ್ರ ನಿರ್ವಹಿಸುತ್ತಿದೆ.

ಯುದ್ಧ ಮತ್ತು ಶಾಂತಿ ಎರಡೂ ಸಮಯದಲ್ಲಿ ಬಿಎಸ್ಎಫ್ ಹೊಂದಿರುವ ಜವಾಬ್ದಾರಿಗಳು ಅದನ್ನು ಒಂದು ವಿಭಿನ್ನವಾದ ಪಡೆಯನ್ನಾಗಿಸಿದೆ. ಬಿಎಸ್ಎಫ್ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಾಗೂ ಈಶಾನ್ಯ ಭಾರತದಲ್ಲಿ ನುಸುಳಕೋರರ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ತನ್ನ ಸಾಮರ್ಥ್ಯ ಮತ್ತು ಬದ್ಧತೆಯನ್ನು ಪ್ರದರ್ಶಿಸಿದೆ. ಈ ಸವಾಲುಗಳ ಜೊತೆಗೆ, ಬಿಎಸ್ಎಫ್ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವಲ್ಲಿ ಅವಿರತವಾಗಿ ಶ್ರಮ ವಹಿಸುತ್ತಿದ್ದು, ದೇಶ ಸೇವೆಯ ಕುರಿತು ಅದರ ಅಸಾಧಾರಣ ಕೊಡುಗೆಯನ್ನು ಸಾಬೀತುಪಡಿಸಿದೆ.

ಇತ್ತೀಚಿನ ಬೆಳವಣಿಗೆಗಳು ಮತ್ತು ಸಾಧನೆಗಳು

ಬಿಎಸ್ಎಫ್ ಸಂಸ್ಥಾಪನಾ ದಿನಾಚರಣೆಯಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಡಿ ಭದ್ರತಾ ಪಡೆಗೆ ಕೃತಜ್ಞತೆಗಳನ್ನು ಅರ್ಪಿಸಿದ್ದು, ದೇಶವನ್ನು ಸುರಕ್ಷಿತವಾಗಿಡುವಲ್ಲಿ ಬಿಎಸ್ಎಫ್ ಶೌರ್ಯ ಮತ್ತು ಜಾಗರೂಕತೆಯನ್ನು ಶ್ಲಾಘಿಸಿದ್ದಾರೆ. ಬಿಎಸ್ಎಫ್ ತನ್ನ 60ನೇ ಸಂಸ್ಥಾಪನಾ ದಿನವನ್ನು ಶ್ರೀನಗರದಲ್ಲಿರುವ ಗಡಿ ಪ್ರದೇಶದ ಮುಖ್ಯ ಕಚೇರಿಯಲ್ಲಿ ಆಚರಿಸಿತು‌. ಈ ಸಮಾರಂಭದಲ್ಲಿ, ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಅದ್ಧೂರಿ ಸಮಾರಂಭ, ‘ಬಾರಾಖಾನಾ’ ಎಂಬ ವಿಶೇಷ ಭೋಜನ ಸೇರಿದ್ದವು. ಆ ಮೂಲಕ, ನಿವೃತ್ತ ಯೋಧರು ಮತ್ತು ಸಕ್ರಿಯ ಯೋಧರನ್ನು ಒಂದೆಡೆ ಸೇರಿಸಿ, ಅವರ ಕೊಡುಗೆಗಳನ್ನು ಸ್ಮರಿಸಿ, ಶ್ಲಾಘಿಸಲಾಯಿತು.

ಇತ್ತೀಚೆಗೆ, ಗಡಿ ಭದ್ರತಾ ಪಡೆ (ಬಿಎಸ್ಎಫ್) ಭಾರತ   ಬಾಂಗ್ಲಾದೇಶ ಗಡಿಯಾದ್ಯಂತ ತನ್ನ ಭದ್ರತಾ ಕ್ರಮಗಳನ್ನು ಹೆಚ್ಚಿಸುತ್ತಿದೆ. ಓರ್ವ ಹಿರಿಯ ಬಿಎಸ್ಎಫ್ ಅಧಿಕಾರಿ ನಾದಿಯಾ ಜಿಲ್ಲೆಯ ಗಡಿ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಬಿಎಸ್ಎಫ್ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳೊಡನೆ ಸಮಾಲೋಚನೆ ನಡೆಸಿದರು.

ಇನ್ನು ಪಂಜಾಬಿನಲ್ಲಿ ಬಿಎಸ್ಎಫ್ ಎರಡು ದಿನಗಳ ಅವಧಿಯಲ್ಲಿ ಎಂಟು ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆಗಟ್ಟಿದ್ದು, ಆ ಮೂಲಕ ದಟ್ಟ ಮಂಜು ಮತ್ತು ಹೊಗೆಯ ವಾತಾವರಣವನ್ನು ಬಳಸಿಕೊಂಡು ಪಾಕಿಸ್ತಾನ ಕಳ್ಳಸಾಗಣೆಯಂತಹ ಅಕ್ರಮ ಚಟುವಟಿಕೆಗಳನ್ನು ನಡೆಸದಂತೆ ತಡೆದಿದೆ. ಇಂತಹ ಕ್ರಮಗಳು ಬಿಎಸ್ಎಫ್ ಗಡಿ ಕಣ್ಗಾವಲು ಮತ್ತು ದೇಶ ರಕ್ಷಣೆಯಲ್ಲಿ ಅವಿಶ್ರಾಂತವಾಗಿ ದುಡಿಯುತ್ತಿರುವುದಕ್ಕೆ ಸಾಕ್ಷಿಯಾಗಿವೆ.

ಸವಾಲುಗಳು ಮತ್ತು ಭವಿಷ್ಯದ ನೋಟ

ಉಗ್ರಗಾಮಿಗಳು ಗಡಿಯನ್ನು ನುಸುಳಿ, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಲು ಪ್ರಯತ್ನ ನಡೆಸುವುದು ಸೇರಿದಂತೆ, ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಲವಾರು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ.

ಭಯೋತ್ಪಾದಕರು ಈಗ ತಮ್ಮನ್ನು ಬಿಎಸ್ಎಫ್ ಹಿಂಬಾಲಿಸದಂತೆ ತಡೆಯುವ ಸಲುವಾಗಿ ಸಂವಹನವನ್ನು ಬಹಳಷ್ಟು ಕಡಿಮೆ ಮಾಡಿಕೊಂಡಿದ್ದು, ಇಂತಹ ಅಪಾಯಗಳನ್ನು ನಿವಾರಿಸಲು ಬಿಎಸ್ಎಫ್ ಹೊಸ ಕಾರ್ಯತಂತ್ರಗಳನ್ನು ಜಾರಿಗೆ ತರುವ ಅನಿವಾರ್ಯತೆಯಿದೆ ಎಂದು ಬಿಎಸ್ಎಫ್ ಅಧಿಕಾರಿ ಅಶೋಕ್ ಯಾದವ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇವೆಲ್ಲ ಕಷ್ಟಗಳ ಹೊರತಾಗಿಯೂ, ಬಿಎಸ್ಎಫ್ ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಬದ್ಧವಾಗಿಯೇ ಮುಂದುವರಿದಿದ್ದು, ದೇಶದ ಗಡಿಗಳು ಮತ್ತು ಜನರ ಸುರಕ್ಷತೆಯನ್ನು ಖಾತ್ರಿಪಡಿಸಿದೆ.

50 ಕಿಲೋಮೀಟರ್ ಹೆಚ್ಚಳ ಕಂಡ ಬಿಎಸ್ಎಫ್ ಕಾರ್ಯಕ್ಷೇತ್ರ

ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಕಾರ್ಯ ವ್ಯಾಪ್ತಿಯನ್ನು ಭಾರತದ ಬಹಳಷ್ಟು ಅಂತಾರಾಷ್ಟ್ರೀಯ ಗಡಿಗಳಿಂದ ದೇಶದ ಒಳಗೆ 50 ಕಿಲೋಮೀಟರ್ ತನಕ ವಿಸ್ತರಿಸಲಾಗಿದೆ. ಇದು ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ಮಯನ್ಮಾರ್‌ಗಳೊಡನೆ ಗಡಿ ಹಂಚಿಕೊಳ್ಳುವ ರಾಜ್ಯಗಳಲ್ಲಿ ಜಾರಿಗೆ ಬಂದಿದೆ.

ಅಕ್ಟೋಬರ್ 11, 2021ರಂದು ಭಾರತದ ಗೃಹ ಸಚಿವಾಲಯ ನೀಡಿದ ಆದೇಶದ ಮೇರೆಗೆ ಈ ಬದಲಾವಣೆ ಜಾರಿಗೆ ಬಂದಿದ್ದು, ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಬಿಎಸ್ಎಫ್ ಪಡೆಗಳಿಗೆ ರಾಜ್ಯ ಪೊಲೀಸರೊಡನೆ ಕೈ ಜೋಡಿಸಿ ಕಾರ್ಯ ನಿರ್ವಹಿಸಿ, ನಿರ್ದಿಷ್ಟ ಅಪರಾಧಗಳನ್ನು ಕಡಿಮೆಗೊಳಿಸಲು ಅವಕಾಶ ಕಲ್ಪಿಸಿದೆ. ಬಿಎಸ್ಎಫ್ ಈಗ ಮಾದಕ ದ್ರವ್ಯ ಕಳ್ಳ ಸಾಗಣೆ, ಅಕ್ರಮ ವಲಸೆ, ಹಾಗೂ ಕೇಂದ್ರದ ಕಾನೂನುಗಳಡಿ ಬರುವ ಇತರ ಅಪರಾಧ ಚಟುವಟಿಕೆಗಳನ್ನು ಪತ್ತೆಹಚ್ಚುವ ಮತ್ತು ವಶಪಡಿಸಿಕೊಳ್ಳುವಂತಹ ಕಾರ್ಯಾಚರಣೆಗಳನ್ನೂ ನಡೆಸಬಹುದು. ಈ ಕ್ರಮ ಭಾರತದ ಗಡಿಗಳ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿ, ಹೊಸ ಹೊಸ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವ ಗುರಿಯನ್ನು ಹೊಂದಿದೆ.

ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯಾಚರಿಸುವ ಬಿಎಸ್ಎಫ್

ಗಡಿ ಭದ್ರತಾ ಪಡೆ (ಬಿಎಸ್ಎಫ್) ಭಾರತದ ಗೃಹ ಸಚಿವಾಲಯದ ಆದೇಶದಡಿ ಕಾರ್ಯ ನಿರ್ವಹಿಸುತ್ತದೆ. ಗಡಿ ನಿರ್ವಹಣೆ, ಭದ್ರತಾ ಕಾರ್ಯಾಚರಣೆಗಳು, ಮತ್ತು ಗಡಿಯಾಚೆಗಿನ ಅಪರಾಧಗಳನ್ನು ತಡೆಯುವಂತಹ ಬಿಎಸ್ಎಫ್ ಜವಾಬ್ದಾರಿಗಳ ಮೇಲ್ವಿಚಾರಣೆಯನ್ನು ಗೃಹ ಸಚಿವಾಲಯವೇ ನಿರ್ವಹಿಸುತ್ತದೆ. ಬಿಎಸ್ಎಫ್ ದೇಶದ ಗಡಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಅವಶ್ಯಕವಾದ ನಿಯಮಾವಳಿಗಳು ಮತ್ತು ಬೆಂಬಲವನ್ನು ಕೇಂದ್ರ ಗೃಹ ಸಚಿವಾಲಯ ಒದಗಿಸುತ್ತದೆ.

ಮಾನವೀಯ ಮೌಲ್ಯದ ಕಥನಗಳು: ಬಿಎಸ್ಎಫ್ ಹೃದಯವಂತಿಕೆ

ತಮ್ಮ ಸಮವಸ್ತ್ರ ಮತ್ತು ತೀವ್ರ ತರಬೇತಿಗಳ ಹೊರತಾಗಿಯೂ, ಬಿಎಸ್ಎಫ್ ಯೋಧರೂ ಕುಟುಂಬ ಮತ್ತು ವೈಯಕ್ತಿಕ ಜೀವನವನ್ನು ಹೊಂದಿರುವ ಮನುಷ್ಯರೇ ಆಗಿದ್ದಾರೆ. ಬಿಎಸ್ಎಫ್ ಬಹಳಷ್ಟು ತ್ಯಾಗ, ಬಲಿದಾನಗಳ ಕಥನಗಳಿಗೆ ಸಾಕ್ಷಿಯಾಗಿದೆ. ಬಿಎಸ್ಎಫ್ ಧ್ಯೇಯವಾಕ್ಯವಾದ ‘ಡ್ಯೂಟಿ ಅನ್‌ಟು ಡೆತ್’ (ಸಾವಿನ ತನಕ ಕರ್ತವ್ಯ) ಎನ್ನುವುದು ದೇಶದ ಕುರಿತು ಬಿಎಸ್ಎಫ್ ಹೊಂದಿರುವ ಅಚಲ ನಿಷ್ಠೆಯನ್ನು ವಿವರಿಸುತ್ತದೆ. ಬಿಎಸ್ಎಫ್ ಸಂಸ್ಥಾಪನಾ ದಿನಾಚರಣೆಯಂದು, ಅವರ ವೃತ್ತಿಪರ ಸಾಧನೆಗಳನ್ನು ಮಾತ್ರವಲ್ಲದೆ, ದೇಶ ಸೇವೆಗಾಗಿ ಬಿಎಸ್ಎಫ್ ಯೋಧರು ಮತ್ತು ಅವರ ಕುಟುಂಬಗಳು ಮಾಡಿರುವ ತ್ಯಾಗಗಳನ್ನೂ ಸ್ಮರಿಸುವುದು ಅತ್ಯಂತ ಮುಖ್ಯವಾಗಿದೆ.

ಒಟ್ಟಾರೆಯಾಗಿ, ಗಡಿ ಭದ್ರತಾ ಪಡೆ ದಿನಾಚರಣೆ ದೇಶದ ಗಡಿಗಳನ್ನು ಕಾಪಾಡಿ, ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಬಿಎಸ್ಎಫ್ ನಿರ್ವಹಿಸುವ ಪ್ರಮುಖ ಪಾತ್ರವನ್ನು ನೆನಪಿಸುವ ದಿನವಾಗಿದೆ. ಈ ದಿನ ಬಿಎಸ್ಎಫ್ ಯೋಧರ ಶೌರ್ಯ   ಸಾಹಸ, ತ್ಯಾಗ, ಬದ್ಧತೆ ಮತ್ತು ದಣಿವರಿಯದ ಪ್ರಯತ್ನಗಳನ್ನು ಶ್ಲಾಘಿಸಲು ಉತ್ತಮ ಅವಕಾಶವಾಗಿದೆ. ಗಡಿಯನ್ನು ಸುರಕ್ಷಿತವಾಗಿಸಲು ಬಿಎಸ್ಎಫ್ ಯೋಧರು ನಡೆಸುವ ಸತತ ಕಣ್ಗಾವಲು ಮತ್ತು ಕಾರ್ಯಾಚರಣೆಗಳು ನಮ್ಮ ನಾಗರಿಕರಿಗೆ ಶಾಂತಿಯಿಂದ ಜೀವಿಸಲು ಸಾಧ್ಯವಾಗಿಸಿವೆ. ಬಿಎಸ್ಎಫ್ ಭಾರತದ ಭದ್ರತಾ ಪಡೆಗಳ ಶಕ್ತಿ ಮತ್ತು ಬದ್ಧತೆಯನ್ನು ಪ್ರತಿನಿಧಿಸಿ, ಕರ್ತವ್ಯ ಮತ್ತು ತ್ಯಾಗದ ನೈಜ ನೆನಪುಗಳನ್ನು ನೀಡುತ್ತಿದೆ.

ಜನ ಸಾಮಾನ್ಯರ ಕರ್ತವ್ಯಗಳು

ಭಾರತದ ಜವಾಬ್ದಾರಿಯುತ ನಾಗರಿಕರಾಗಿ, ನಾವು ಗಡಿ ಭದ್ರತಾ ಪಡೆಗಳು ನಡೆಸುವ ಕರ್ತವ್ಯವನ್ನು ಅರಿತು, ಅವರು ಎದುರಿಸುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಬಿಎಸ್ಎಫ್‌ಗೆ ಬೆಂಬಲ ನೀಡಬೇಕು. ಬಿಎಸ್ಎಫ್ ಸೇವೆಗೆ ನಮ್ಮ ಶ್ಲಾಘನೆಯನ್ನು ನೀಡುತ್ತಾ, ದೇಶಕ್ಕಾಗಿ ಬಿಎಸ್ಎಫ್‌ನ ವೀರ ಯೋಧರು ಮತ್ತು ಅವರ ಕುಟುಂಬಸ್ತರು ನಡೆಸಿರುವ ತ್ಯಾಗಗಳನ್ನು ಸ್ಮರಿಸಬೇಕು. ಈ ದಿನದಂದು ದೇಶದ ಭದ್ರತೆಯ ಕುರಿತು ಅವರ ತ್ಯಾಗ, ಬದ್ಧತೆಯನ್ನು ಸ್ಮರಿಸಲು, ನಮ್ಮನ್ನು ಸುರಕ್ಷಿತವಾಗಿಡಲು ಅವರ ಅವಿಶ್ರಾಂತ ದುಡಿಮೆಯನ್ನು ಸ್ಮರಿಸಲು ನಾವು ಕೆಲ ಸಮಯವನ್ನು ಮೀಸಲಿಡಬಹುದು.

ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

ಗಡಿ ಭದ್ರತಾ ಪಡೆ ಎನ್ನುವುದು ದೇಶದ ರಕ್ಷಣೆಯ ಗುರಾಣಿ ಮಾತ್ರವಲ್ಲದೆ, ಭಾರತದ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಪ್ರತಿನಿಧಿಸುವ ಪಡೆಯೂ ಹೌದು. ಬಿಎಸ್ಎಫ್ ದಿನಾಚರಣೆಯಂದು ಭಾರತೀಯರೆಲ್ಲರೂ ಒಗ್ಗಟ್ಟಿನಿಂದ ನಮ್ಮ ಗಡಿಗಳನ್ನು ಕಾಯುವ ವೀರ ಯೋಧರನ್ನು ಸ್ಮರಿಸೋಣ. ಅವರ ಧೈರ್ಯ ಮತ್ತು ಸಮರ್ಪಣಾ ಭಾವ ಎಲ್ಲ ಭಾರತೀಯರಿಗೂ ಸ್ಫೂರ್ತಿದಾಯಕ.

*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Advertisement

Udayavani is now on Telegram. Click here to join our channel and stay updated with the latest news.

Next