ಮುಂಬಯಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದಲ್ಲಿನ ಬಿಜೆಪಿ ಸರಕಾರದ ಮೂರು ವರ್ಷಗಳ ಸಾಧನೆ-ಸಂಭ್ರಮದಿಂದ ಗರಿಗೆದಿರಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಶುಕ್ರವಾರದ ವಹಿವಾಟನ್ನು ನೂತನ ಸಾರ್ವಕಾಲಿಕ ದಾಖಲೆಯಾಗಿ ಇದೇ ಮೊದಲ ಬಾರಿಗೆ 31,000 ಅಂಕಗಳಿಗಿಂತ ಮೇಲಿನ ಮಟ್ಟದಲ್ಲಿ ಕೊನೆಗೊಳಿಸಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಶೇ.1ರಷ್ಟು ಏರಿಕೆಯನ್ನು ಸಾಧಿಸಿ, 85.35 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು ಸಾರ್ವಕಾಲಿಕ ದಾಖಲೆಯ ಎತ್ತರವಾಗಿ 9,595.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿಯ ಇಂದಿನ ಸಾರ್ವಕಾಲಿಕ ದಾಖಲೆಯ ಸಾಧನೆಯನ್ನು ದೇಶಾದ್ಯಂತದ ಅಸಂಖ್ಯ ಶೇರು ವ್ಯವಹಾರ ಕಾರ್ಯಾಲಯಗಳಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಸೆನ್ಸೆಕ್ಸ್ ಮತ್ತು ನಿಫ್ಟಿಯ ಇಂದಿನ ಸಾರ್ವಕಾಲಿಕ ದಾಖಲೆಗಳಿಗೆ ಮಿಡ್ ಕ್ಯಾಪ್ ಮತ್ತು ಖಾಸಗಿ ಬ್ಯಾಂಕ್ ಶೇರುಗಳು ಗಮನಾರ್ಹ ಕೊಡುಗೆಯನ್ನು ನೀಡಿದವು. ಆದರೆ ಫಾರ್ಮಾ ಶೇರುಗಳು ಕಳಪೆ ವಾರ್ಷಿಕ ಫಲಿತಾಂಶಗಳಿಂದಾಗಿ ಹಿನ್ನಡೆಗೆ ಗುರಿಯಾದವು.
ಇಂದಿನ ವಹಿವಾಟಿನಲ್ಲಿ 1,810 ಶೇರುಗಳು ಮುನ್ನಡೆ ಸಾಧಿಸಿದವು; 854 ಶೇರುಗಳು ಹಿನ್ನಡೆಗೆ ಗುರಿಯಾದವು; 182 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.