ಮುಂಬಯಿ : ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿರುವುದು ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರುತ್ತಿರುವುದು ಕಳವಳಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 273 ಅಂಕಗಳ ನಷ್ಟದೊಂದಿಗೆ 35,217.11 ಅಂಕಗಳ ಮಟ್ಟಕ್ಕೆ ಕುಸಿದು ನಿರಾಶಾದಾಯಕವಾಗಿ ಕೊನೆಗೊಳಿಸಿದೆ.
ಕಳೆದ ಜೂನ್ 6ರ ಬಳಿಕದಲ್ಲಿ ಸೆನ್ಸೆಕ್ಸ್ ಕಂಡಿರುವ ಕನಿಷ್ಠ ಮಟ್ಟ ಇಂದಿನದ್ದಾಗಿದೆ. ಡಾಲರ್ ಎದುರು ರೂಪಾಯಿ ಇಂದು ಒಂದೂವರೆ ವರ್ಷದ ಕನಿಷ್ಠ ಮಟ್ಟಕ್ಕೆ ಕಸಿದದ್ದು ಕೂಡ ಶೇರು ಮಾರುಕಟ್ಟೆಯ ಹಿನ್ನಡೆಗೆ ಕಾರಣವಾಗಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 97.75 ಅಂಕಗಳ ನಷ್ಟದೊಂದಿಗೆ 10,671.40 ಅಂಕಗಳ ಮಟ್ಟಕ್ಕೆ ಕುಸಿಯಿತು.
ಪಿಎನ್‌ಬಿ, ಬಿಓಬಿ, ಎಸ್‌ಬಿಐ, ಸಿಂಡಿಕೇಟ್ ಬ್ಯಾಂಕ್, ಒರಿಯಂಟಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಶೇರುಗಳು ಇಂದು ಶೇ.6.61ರಷ್ಟು ಕುಸಿದವು.
ನಾಳೆ ಗುರುವಾರ ಜೂನ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ಆಗಲಿರುವ ಕಾರಣ ವಹಿವಾಟುದಾರರು ಇಂದೇ ಎಚ್ಚರಿಕೆಯ ನಡೆ ತೋರಿದುದು ಸೆನ್ಸೆಕ್ಸ್ ಹಿನ್ನಡೆಗೆ ಕಾರಣವಾಯಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು 2,795 ಶೇರುಗಳು ವಹಿವಾಟಿಗೆ ಒಳಪಟ್ಟವು; 490 ಶೇರುಗಳು ಮುನ್ನಡೆ ಕಂಡವು 2,190 ಶೇರುಗಳು ಹಿನ್ನಡೆಗೆ ಗುರಿಯಾದವು; 115 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.