ಮುಂಬಯಿ : ನಿರಂತರ ಆರು ದಿನಗಳಿಂದ ದಾಖಲೆ ಮೇಲೆ ದಾಖಲೆ ಸೃಷ್ಟಿಸುತ್ತಾ ಲಾಭದ ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 111 ಅಂಕಗಳ ನಷ್ಟದೊಂದಿಗೆ 36,050.44 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 16.35 ಅಂಕಗಳ ನಷ್ಟದೊಂದಿಗೆ 11,069.65 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ನಾಳೆ ಶುಕ್ರವಾರ ಗಣರಾಜ್ಯೋತ್ಸವ ದಿನದ ಪ್ರಯುಕ್ತದ ರಜೆಯೊಂದಿಗೆ ದೀರ್ಘ ವಾರಾಂತ್ಯ ಇರುವುದರಿಂದ ಮತ್ತು ಹೂಡಿಕೆದಾರರ ದೃಷ್ಟಿ ಈಗ ಬಜೆಟ್ ಮೇಲೆ ಕೇಂದ್ರೀಕೃತವಾಗಿರುವುದರಿಂದ ಮುಂಬಯಿ ಶೇರು ಪೇಟೆಯಲ್ಲಿಂದು ಎಚ್ಚರಿಕೆಯ ನಡೆ ತೋರಿ ಬಂತು.
ಕಳೆದ ಆರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 1,390.53 ಅಂಕಗಳನ್ನು ಸಂಪಾದಿಸಿತ್ತು.
ಇಂದು 3,008 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,145 ಶೇರುಗಳು ಮುನ್ನಡೆ ಕಂಡವು; 1,702 ಶೇರು ಹಿನ್ನಡೆಗೆ ಗುರಿಯಾಯಿತು. 161 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.