ಮುಂಬಯಿ : ಇಂದು ಮಂಗಳವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 185 ಅಂಕಗಳ ಏರಿಕೆಯನ್ನು ಸಾಧಿಸಿ ಹೊಸ ಸಾರ್ವಕಾಲಿಕ ದಾಖಲೆಯ ಮಟ್ಟವಾಗಿ 37,876.87 ಅಂಕ ತಲುಪಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಅನಂತರದಲ್ಲಿ ನಾಟಕೀಯ ಕುಸಿತ ಕಂಡು ದಿನದ ವಹಿವಾಟನ್ನು 26.09 ಅಂಕಗಳ ನಷ್ಟದೊಂದಿಗೆ 37,665.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹಾಗಿದ್ದರೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 2.40 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು ದಿನದ ವಹಿವಾಟನ್ನು ಹೊಸ ಸಾರ್ವಕಾಲಿಕ ದಾಖಲೆಯ 11,389.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಹಿವಾಟುದಾರರು ಮತ್ತು ಹೂಡಿಕೆದಾರರು ಇಂದು ಲಾಭನಗದೀಕರಣಕ್ಕೆ ಆದ್ಯತೆ ನೀಡಿದ ಪರಿಣಾಮವಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ತಮ್ಮ ದಾಖಲೆಯ ಮಟ್ಟದಿಂದ ಕೆಳಗಿಳಿದವು.
ಟಾಪ್ ಲೂಸರ್ ಪಟ್ಟಿ ಸೇರಿದ ಅದಾನಿ ಪೋರ್ಟ್, ಕೋಲ್ ಇಂಡಿಯಾ, ಎಸ್‌ಬಿಐ, ಒಎನ್‌ಜಿಸಿ, ಸನ್ ಫಾರ್ಮಾ, ಟಾಟಾ ಮೋಟರ್, ಭಾರ್ತಿ ಏರ್ ಟೆಲ್, ಎಕ್ಸಿಸ್ ಬ್ಯಾಂಕ್, ಮಹೀಂದ್ರ, ಆರ್‌ಐಎಲ್, ಐಸಿಐಸಿಐ ಬ್ಯಾಂಕ್, ಟಿಸಿಎಸ್, ಎಚ್ ಡಿ ಎಫ್ ಸಿ, ಐಟಿಸಿ ಮೊದಲಾದ ಕಂಪೆನಿಗಳ ಶೇರುಗಳು ಶೇ.6.49ರಷ್ಟು ಕುಸಿದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,875 ಶೇರುಗಳು ವಹಿವಾಟಿಗೆ ಒಳಪಟ್ಟವು; 1,255 ಶೇರುಗಳು ಮುನ್ನಡೆ ಕಂಡವು; 1,471 ಶೇರುಗಳು ಹಿನ್ನಡೆಗೆ ಗುರಿಯಾದವು; 149 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.