ಮುಂಬಯಿ: ಅಮೆರಿಕ ಫೆಡ್ ರೇಟ್ ಏರುವ ಭೀತಿಯಲ್ಲಿ ಮುಳುಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 137 ಅಂಕಗಳ ನಷ್ಟದೊಂದಿಗೆ 34,046.94 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 34.50 ಅಂಕಗಳ ನಷ್ಟದೊಂದಿಗೆ 10,458,35 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಡಿಸೆಂಬರ್ ತ್ತೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.7.2ರ ಸಾಧನೆಯನ್ನು ಮಾಡಿರುವ ಹೆಗ್ಗಳಿಕೆಯನ್ನು ಕೂಡ ಲೆಕ್ಕಿಸದ ಮುಂಬಯಿ ಶೇರು ಪೇಟೆಯಲ್ಲಿ ಇಂದು ಬ್ಯಾಂಕಿಂಗ್ ಶೇರುಗಳು ವಿಪರೀತ ಹೊಡೆತಕ್ಕೆ ಗುರಿಯಾದವು.
ಕೆಲವೇ ಕೆಲವು ಆಯ್ದ ಆಟೋ ಶೇರುಗಳು ಮಾತ್ರವೇ ಇಂದು ಬೇಡಿಕೆಯನ್ನು ಪಡೆದುಕೊಂಡವು. ಫೆಬ್ರವರಿ ತಿಂಗಳ ಮೋಟಾರು ವಾಹನ ಮಾರಾಟ ಉತ್ತೇಜನಕಾರಿಯಾಗಿದ್ದುದೇ ಇದಕ್ಕೆ ಕಾರಣವಾಗಿತ್ತು.
ನಾಳೆ ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ಶೇರು ಮಾರುಕಟ್ಟೆಗೆ ರಜೆ ಇರುವುದರಿಂದ ಈ ವಾರದ ವಹಿವಾಟು ಇಂದಿಗೇ ಮುಗಿದಿದೆ. ಈ ವಾರದಲ್ಲಿ ಸೆನ್ಸೆಕ್ಸ್ ಒಟ್ಟಾರೆಯಾಗಿ 95.21 ಅಂಕ ಮತ್ತು ನಿಫ್ಟಿ 32.70 ಅಂಕಗಳ ನಷ್ಟಕ್ಕೆ ಗುರಿಯಾಗಿವೆ.