ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿಬಂದುದನ್ನು ಅನುಸರಿಸಿ, ಹೂಡಿಕೆದಾರರು ಮತ್ತು ವಹಿವಾಟುದಾರರು ಆಯ್ದ ಬ್ಲೂಚಿಪ್ ಕಂಪನಿಗಳ ಶೇರುಗಳ ಖರೀದಿಯಲ್ಲಿ ಆಸಕ್ತಿ ತೋರಿದ ಪರಿಣಾಮವಾಗಿ, ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 79 ಅಂಕಗಳ ಏರಿಕೆಯನ್ನು ಸಾಧಿಸಿತು.
ಉತ್ತರ ಕೊರಿಯ ತೋರಿದ ಪರಮಾಣು ಪರೀಕ್ಷೆಯ ಹುಚ್ಚಾಟಕ್ಕೆ ಬೆದರಿದ ವಿಶ್ವ ಶೇರು ಮಾರುಕಟ್ಟೆಗಳು ನಿನ್ನೆ ಹಿನ್ನಡೆಗೆ ಗುರಿಯಾಗಿದ್ದವು. ಅಂತೆಯೇ ಮುಂಬಯಿ ಶೇರು ಪೇಟೆ ನಿನ್ನೆ ಸೋಮವಾರದ ವಹಿವಾಟನ್ನು 189.98 ಅಂಕಗಳ ನಷ್ಟದೊಂದಿಗೆ ಮುಗಿಸಿತ್ತು.
ಇಂದು ಬೆಳಗ್ಗೆ 10.40ರ ಸುಮಾರಿಗೆ ಸೆನ್ಸೆಕ್ಸ್ 93.34 ಅಂಕಗಳ ಮುನ್ನಡೆಯೊಂದಿಗೆ 31,795.59 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 24.30 ಅಂಕಗಳ ನಷ್ಟದೊಂದಿಗೆ 9,937.15 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟೆಕ್ ಮಹೀಂದ್ರ, ಏಶ್ಯನ್ ಪೇಂಟ್, ಬಜಾಜ್ ಆಟೋ, ಅಂಬುಜಾ ಸಿಮೆಂಟ್ಸ್ ಮತ್ತು ಟಾಟಾ ಸ್ಟೀಲ್ ಟಾಪ್ ಗೇನರ್ ಎನಿಸಿಕೊಂಡವು.
ಭಾರ್ತಿ ಏರ್‌ಟೆಲ್, ಭಾರ್ತಿ ಇನ್‌ಫ್ರಾಟೆಲ್, ಲೂಪಿನ್, ಸನ್ ಫಾರ್ಮಾ, ಎಚ್‌ಸಿಎಲ್ ಟೆಕ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.