ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಇಂದು ಸೋಮವಾರ ನಡೆದ ಚುನಾವಣಾ ಪೂರ್ವ ರಾಲಿಯಲ್ಲಿ ಸೆನ್ಸೆಕ್ಸ್ 383 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿದ್ದು ಇದು ಕಳೆದ ಆರು ತಿಂಗಳಲ್ಲೇ ಮುಂಬಯಿ ಶೇರು ಪೇಟೆ ದಾಖಲಿಸಿರುವ ಅತೀ ದೊಡ್ಡ ಏರಿಕೆಯಾಗಿದೆ. ಅಂತೆಯೇ ಸೆನ್ಸೆಕ್ಸ್ ಇಂದು 37,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಮತ್ತೆ ಗಳಿಸಿದೆ.
ಇಂದಿನ ವಹಿವಾಟಿನಲ್ಲಿ ಆರ್‌ಐಎಲ್, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ಶೇರುಗಳು ಭರ್ಜರಿ ಏರಿಕೆಯನ್ನು ದಾಖಲಿಸಿದವು. ವಿದೇಶೀ ಬಂಡವಾಳದ ನಿರಂತರ ಒಳ ಹರಿವು ಮತ್ತು ಜಾಗತಿಕ ಶೇರು ಪೇಟೆಗಳಲ್ಲಿನ ಧನಾತ್ಮಕತೆಯೇ ಮೊದಲಾದ ಕಾರಣಗಳು ಮುಂಬಯಿ ಶೇರು ಪೇಟೆಯಲ್ಲಿನ ತೇಜಿಗೆ ಕಾರಣವಾಯಿತು.
2019ರ ಲೋಸಭಾ ಚುನಾವಣೆಗಳ ವೇಳಾ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಎನ್‌ಡಿಎ ಸರಕಾರ ಮರಳಿ ಅಧಿಕಾರಕ್ಕೆ ಬರುವುದೆಂಬ ವಿಶ್ವಾಸ ದೇಶದ ಹಣಕಾಸು ಮಾರುಕಟ್ಟೆಗಳಲ್ಲಿ ಮೂಡಿರುವುದೇ ಮುಂಬಯಿ ಶೇರು ಪೇಟೆಯ ತೇಜಿಗೆ ಇಂಬು ನೀಡಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 132.65 ಅಂಕಗಳ (ಶೇ.1.20) ಏರಿಕೆಯನ್ನು ದಾಖಲಿಸಿ 11,168.05 ಅಂಕಗಳ ಮಟ್ಟವನ್ನು ತಲುಪಿತು.
ಇಂದಿನ ವಹಿವಾಟಿನಲ್ಲಿ ಪವರ್, ಆಯಿಲ್ ಆ್ಯಂಡ್ ಗ್ಯಾಸ್, ಪಿಎಸ್‌ಯು, ಮೆಟಲ್, ಬ್ಯಾಂಕಿ,ಗ್, ಆಟೋ, ಕ್ಯಾಪಿಟಲ್ ಗೂಡ್ಸ್, ಇನ್‌ಫ್ರಾಸ್ಟ್ರಕ್ಚರ್ ಮತ್ತು ಹೆಲ್ತ್ ಕೇರ್ ರಂಗದ ಶೇರುಗಳು ಇಂದು ಉತ್ತಮ ಮುನ್ನಡೆಯನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,843 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,758 ಶೇರುಗಳು ಮುನ್ನಡೆ ಸಾಧಿಸಿದವು; 893 ಶೇರುಗಳು ಹಿನ್ನಡೆಗೆ ಗುರಿಯಾದವು; 192 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.