ಮುಂಬಯಿ : ಕಳೆದ ಶನಿವಾರ ಜಿಎಸ್‌ಟಿ ಕೌನ್ಸಿಲ್ ನೂರಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ದರಗಳನ್ನು ಕಡಿತಗೊಳಿಸಿರುವುದು, ವಿದೇಶಿ ಬಂಡವಾಳದಲ್ಲಿ ಹೊಸ ಹರಿವು ಸಾಗಿಬಂದಿರುವುದು ಮತ್ತು ಮುಂಚೂಣಿ ಶೇರುಗಳ ಖರೀದಿ ಮತ್ತೆ ಆರಂಭಗೊಂಡಿರುವುದು – ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಏರಿಕೆಯನ್ನು ದಾಖಲಿಸಿತು.
ಕಳೆದ ಶುಕ್ರವಾರದ ವಹಿವಾಟಿನಲ್ಲಿ 145.14 ಅಂಕಗಳ ಏರಿಕೆಯನ್ನು ದಾಖಲಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 11.15ರ ಸುಮಾರಿಗೆ 77.40 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,573.77 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 24.00 ಅಂಕಗಳ ಮುನ್ನಡೆಯೊಂದಿಗೆ 11,034.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಡಾಲರ್ ಎದುರು ರೂಪಾಯಿ 19 ಪೈಸೆಯಷ್ಟು ಜಿಗಿದು 68.65 ರೂ. ಮಟ್ಟಕ್ಕೆ ಏರಿರುವುದು ಕೂಡ ಮುಂಬಯಿ ಶೇರು ಮಾರುಕಟ್ಟೆಯಲ್ಲಿನ ತೇಜಿಗೆ ಕಾರಣವಾಯಿತು.
ಬಜಾಜ್ ಫಿನಾನ್ಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಐಟಿಸಿ, ಯುಪಿಎಲ್, ಬಜಾಜ್ ಆಟೋ ಶೇರುಗಳು ಇಂದು ಬೆಳಗ್ಗೆ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಯುಪಿಎಲ್, ಐಟಿಸಿ, ಬಜಾಜ್ ಫಿನ್ ಸರ್ವ್, ಏಶ್ಯನ್ ಪೇಂಟ್, ಭಾರ್ತಿ ಏರ್‌ಟೆಲ್. ಟಾಪ್ ಲೂಸರ್‌ಗಳು : ಹೀರೋ ಮೋಟೋಕಾರ್ಪ್, ಬಜಾಜ್ ಆಟೋ, ವಿಪ್ರೋ, ಟೆಕ್ ಮಹೀಂದ್ರ, ಹಿಂಡಾಲ್ಕೊ.