ಮುಂಬಯಿ : ಕಾರು ಉತ್ಪಾದನೆಯ ಭಾರತದ ಅತೀ ದೊಡ್ಡ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಎಲ್ಲರ ನಿರೀಕ್ಷೆಗೂ ಮೀರಿ ಜುಲೈ ತಿಂಗಳ ಮಾರಾಟದಲ್ಲಿ ಶೇ.20.6ರ ವೃದ್ಧಿಯನ್ನು ಸಾಧಿಸುವ ಮೂಲಕ ಹೊಸ ವಿಕ್ರಮವನ್ನೇ ದಾಖಲಿಸಿದೆ. ಅಂತೆಯೇ ಇಂದು ಮಂಗಳವಾರದ ವಹಿವಾಟಿನಲ್ಲಿ ಮೋಟಾರು ವಾಹನ ಉತ್ಪಾದಕ ಕಂಪೆನಿಗಳು ಬಹುವಾಗಿ ವಿಜೃಂಭಿಸಿವೆ.
ಇಂದಿನ ವಹಿವಾಟಿನ ಕೊನೇ ತಾಸಿನಲ್ಲಿ ನಡೆದ ಬಿರುಸಿನ ಖರೀದಿಯ ಬಲದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನಾಂತ್ಯದ ಹೊಸ ಎತ್ತರದ ದಾಖಲೆಯನ್ನು ಮಾಡಿವೆ.
ಸೆನ್ಸೆಕ್ಸ್ 60.23 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ಹೊಸ ಎತ್ತರವಾಗಿ 32,575.17 ಅಂಕಗಳ ಮಟ್ಟವನ್ನು ತಲುಪಿದರೆ, ನಿಫ್ಟಿ ಸೂಚ್ಯಂಕ 37.55 ಅಂಕಗಳ ಏರಿಕೆಯೊಂದಿಗೆ 10,114.65 ಅಂಕಗಳ ದಿನಾಂತ್ಯದ ಹೊಸ ಎತ್ತರವನ್ನು ತಲುಪಿತು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,046 ಶೇರುಗಳು ಮುನ್ನಡೆ ಸಾಧಿಸಿದವು; 1,627 ಶೇರುಗಳು ಹಿನ್ನಡೆಗೆ ಗುರಿಯಾದವು; 165 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಆಟೋ ಶೇರುಗಳ ಪೈಕಿ ಮಾರುತಿ ಸುಜುಕಿ ಇಂದು ಹೊಳೆದು ವಿಜೃಂಭಿಸಿತು. ಈಶರ್ ಮೋಟರ್, ಹೀರೋ ಮೋಟೋ ಕಾರ್ಪ್ ಶೇರುಗಳು ಮಾರುತಿಯನ್ನು ಅನುಸರಿಸಿದವು. ಇದೇ ವೇಳೆ ಇಂಡಿಯಾ ಬುಲ್ಸ್ ಹೌಸಿಂಗ್ ಟಾಪ್ ಗೇನರ್ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಹಾಗಿದ್ದರೂ ಲೂಪಿನ್, ಒಎನ್‌ಜಿಸಿ, ಬ್ಯಾಂಕ್ ಆಫ್ ಬರೋಡ ಕೆಳಮುಖವಾದವು.