ಮುಂಬಯಿ : ಆರ್‌ಬಿಐ ತನ್ನ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿರುವುದನ್ನು ಶೇರು ಮಾರುಕಟ್ಟೆ ಸ್ವಾಗತಿಸಿದೆ. ಅಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 80.72 ಅಂಕಗಳ ಏರಿಕೆಯೊಂದಿಗೆ 31,271.28 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 26.75 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 9,663.90 ಅಂಕಗಳ ಮಟ್ಟದಲ್ಲಿ ಮುಕ್ತಾಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಇಂಟ್ರಾಡೇ ಎತ್ತರವಾಗಿ 31,346.99 ಅಂಕಗಳ ಮಟ್ಟವನ್ನು ತಲುಪಿತ್ತಾದರೆ, ನಿಫ್ಟಿ 9,678.55 ಅಂಕಗಳ ಮಟ್ಟವನ್ನು ಏರಿತ್ತು.
ಆರ್‌ಬಿಐ ತನ್ನ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡ ಪ್ರಯುಕ್ತ ಬ್ಯಾಂಕ್ ಶೇರುಗಳು ಗರಿಗೆದರಿದವು. ಇಂದಿನ ಟಾಪ್ ಗೇನರ್‌ಗಳಾಗಿ ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಮಹೀಂದ್ರ, ಸನ್ ಫಾರ್ಮಾ, ಎಚ್‌ಯುಎಲ್ ಶೇರುಗಳು ವಿಜೃಂಭಿಸಿದವು.
ಇದೇ ವೇಳೆ ಟಿಸಿಎಸ್, ವಿಪ್ರೋ, ಇನ್‌ಫೋಸಿಸ್, ಟಾಟಾ ಮೋಟರ್, ಅದಾನಿ ಪೋರ್ಟ್ ಶೇರುಗಳು ಟಾಪ್ ಲೂಸರ್ ಎನಿಸಿದವು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳು 2,989; ಮುನ್ನಡೆ ಕಂಡವುಗಳು 1,565; ಹಿನ್ನಡೆಗೆ ಗುರಿಯಾದವುಗಳು 1,254; ಬದಲಾವಣೆ ಕಾಣದೆ ಉಳಿದವುಗಳು 170.