ಮುಂಬಯಿ : ಡಾಲರ್ ಎದುರು ರೂಪಾಯಿ ಇನ್ನೊಂದು ಸಾರ್ವಕಾಲಿಕ ತಳ ಮಟ್ಟವನ್ನು ತಲುಪಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಹಣಕಾಸು ವಲಯದ ಶೇರುಗಳು ತೀವ್ರ ಮಾರಾಟದ ಒತ್ತಡಕ್ಕೆ ಗುರಿಯಾಗುವುದರೊಂದಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಎರಡನೇ ದಿನದ ಸೋಲಿನ ರೂಪದಲ್ಲಿ ಇಂದು ಗುರುವಾರದ ವಹಿವಾಟನ್ನು 32.83 ಅಂಕಗಳ ನಷ್ಟದೊಂದಿಗೆ 38,690.10 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 15.10 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,676.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಆಗಸ್ಟ್ ತಿಂಗಳ ವಾಯಿದೆ ವಹಿವಾಟು ತಿಂಗಳ ಕೊನೆಯ ಗುರುವಾರವಾಗಿ ಇಂದು ಚುಕ್ತಾ ಗೊಂಡ ಪ್ರಯುಕ್ತ ಸೆನ್ಸೆಕ್ಸ್, ನಿಫ್ಟಿ ಹಿನ್ನಡೆಗೆ ಗುರಿಯಾದವು. ಮೇಲಾಗಿ ನಾಳೆ ಶುಕ್ರವಾರ ಜೂನ್ ತ್ತೈಮಾಸಿಕದ ಜಿಡಿಪಿ ಪ್ರಕಟವಾಗುವುದರ ಮೇಲೆಯೇ ಹೂಡಿಕೆದಾರರು ಮತ್ತು ವಹಿವಾಟುದಾರರ ಕಣ್ಣು ನೆಟ್ಟಿದ್ದಾರೆ. ನಿನ್ನೆ ಗುರುವಾರ ಸೆನ್ಸೆಕ್ಸ್ 173.70 ಅಂಕಗಳ ಕುಸಿತಕ್ಕೆ ಗುರಿಯಾಗುವ ಮೂಲಕ ಸಾರ್ವಕಾಲಿಕ ದಾಖಲೆಯ 38,989.65 ಅಂಕಗಳ ಮಟ್ಟದಿಂದ ಹಿಂದೆ ಸರಿದಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,877 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,459 ಶೇರುಗಳು ಮುನ್ನಡೆ ಸಾಧಿಸಿದವು; 1,256 ಶೇರುಗಳು ಹಿನ್ನಡೆ ಕಂಡವು; 162 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.