ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ನಿರುತ್ಸಾಹದ ವಾತಾವರಣ ಮಡುಗಟ್ಟಿರುವುದನ್ನು ಅನುಸರಿಸಿರುವ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 54 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಐಟಿ ಹಾಗೂ ಮೆಟಲ್ ಶೇರುಗಳಲ್ಲಿ ದೌರ್ಬಲ್ಯ ಕಂಡು ಬಂದಿದ್ದು ವಹಿವಾಟುದಾರರು ಈಚಿನ ಲಾಭಗಳ ನಗದೀಕರಣಕ್ಕೆ ಒತ್ತು ನೀಡಿ ಶೇರು ಮಾರಾಟಕ್ಕೆ ಮುಂದಾದರು. ಪರಿಣಾವಾಗಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಮುಗ್ಗರಿಸಿತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 30.95 ಅಂಕಗಳ ನಷ್ಟದೊಂದಿಗೆ 33,311.85 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 15.50 ಅಂಕಗಳ ನಷ್ಟದೊಂದಿಗೆ 10,268.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಕಳೆದ ವಾರ ಸೆನ್ಸೆಕ್ಸ್ ನಿರಂತರ ಎರಡು ದಿನಗಳ ವಹಿವಾಟಿನಲ್ಲಿ 582.36 ಅಂಕಗಳನ್ನು ಸಂಪಾದಿಸಿತ್ತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಎಸ್‌ಬಿಐ, ಎಸ್ ಬ್ಯಾಂಕ್, ಲಾರ್ಸನ್, ಎಚ್ ಡಿ ಎಫ್ ಸಿ, ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.