ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಉತ್ಸಾಹ ಮತ್ತು ತೇಜಿಯ ಪ್ರವೃತ್ತಿ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 154 ಅಂಕಗಳ ಉತ್ತಮ ಜಿಗಿತವನ್ನು ಸಾಧಿಸಿತು.
ಜಾಗತಿಕ ಆರ್ಥಿಕ ರಂಗದಲ್ಲಿನ ಬೆಳವಣಿಗೆಗಳು ಧನಾತ್ಮಕವಾಗಿರುವುದನ್ನು ಅನುಸರಿಸಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಪ್ರಮಾಣದ ಬಂಡವಾಳವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಲು ಮುಂದಾದದ್ದೇ ಇಂದಿನ ತೇಜಿಗೆ ಕಾರಣವಾಯಿತು.
ಮೇಲಾಗಿ ಡಾಲರ್ ಎದುರಿನ ರೂಪಾಯಿ ವಿನಿಮಯ ದರ ಎಂಟು ಪೈಸೆಯಷ್ಟು ಚೇತರಿಸಿಕೊಂಡು 65.02 ರೂ. ನಲ್ಲಿ ಸ್ಥಿತವಾದದ್ದು ಕೂಡ ಮುಂಬಯಿ ಶೇರು ಪೇಟೆಗೆ ಹೊಸ ಉತ್ಸಾಹವನ್ನು ತುಂಬಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 174.48 ಅಂಕಗಳ ಮುನ್ನಡೆಯನ್ನು ಸಾಧಿಸಿ 33,534.38 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 48.20 ಅಂಕಗಳ ಏರಿಕೆಯನ್ನು ದಾಖಲಿಸಿ 10,347 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ತೇಜಿಗೆ ರಿಲಯನ್ಸ್ ಇಂಡಸ್ಟ್ರೀಸ್, ಇನ್‌ಫೋಸಿಸ್, ಬ್ಯಾಂಕ್‌ಗಳು ಮತ್ತು ಮೆಟಲ್ ಶೇರುಗಳು ಕಾರಣವಾದವು.