ಮುಂಬಯಿ: ದಿನದ ವಹಿವಾಟಿನ ಉದ್ದಕ್ಕೂ ನಿರಂತರ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟನ್ನು 30.13 ಅಂಕಗಳ ಅಲ್ಪ ಏರಿಕೆಯೊಂದಿಗೆ 30,464.92 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 1.55 ಅಂಕಗಳ ನಷ್ಟವನ್ನು ದಾಖಲಿಸಿ ದಿನದ ವಹಿವಾಟನ್ನು 9,427.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಜಿಎಸ್‌ಟಿ ತೆರಿಗೆ ದರಗಳು ಬಹುತೇಕ ನಿಗದಿಯಾಗಿವೆ ಎಂಬ ಕಾರಣಕ್ಕೆ ಮುಂಬಯಿ ಶೇರು ಪೇಟೆ 209 ಅಂಕಗಳ ಮುನ್ನಡೆಯನ್ನು ಕಂಡಿತ್ತು.ಆದರೆ ಅನಂತರದಲ್ಲಿ ವಾರಾಂತ್ಯದ ಲಾಭ ನಗದೀಕರಣಕ್ಕೆ ವಹಿವಾಟುದಾರರು ಕೈಹಾಕಿದ ಪರಿಣಾಮವಾಗಿ ಶೇರುಪೇಟೆ ನಿರಂತರ ಓಲಾಟಕ್ಕೆ ಗುರಿಯಾಯಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 985 ಶೇರುಗಳು ಮುನ್ನಡೆ ಸಾಧಿಸಿದವು; 1,759 ಶೇರುಗಳು ಹಿನ್ನಡೆಗೆ ಗುರಿಯಾದವು. 169 ಶೇರುಗಳು ಬದಲಾಗದೆ ಉಳಿದವು.
ಪ್ರಮುಖ ಎಫ್ಎಂಸಿಜಿ ಕಂಪೆನಿಗಳಾದ ಐಟಿಸಿ ಮತ್ತು ಎಚ್‌ಯುಎಲ್ ಟಾಪ್ ಗೇನರ್ ಎನಿಸಿಕೊಂಡವು; ಏಶ್ಯನ್ ಪೇಂಟ್ಸ್, ಮಹಿಂದ್ರ, ಬಿಪಿಸಿಎಲ್ ಹಿನ್ನಡೆಗೆ ಗುರಿಯಾದವು.