ಮುಂಬಯಿ : ಧನಾತ್ಮಕವಾಗಿ ಆರಂಭಗೊಂಡ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರ ಬೆಳಗ್ಗೆ 100ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಅಮೆರಿಕ ಔದ್ಯೋಗಿಕ ಅಂಕಿ ಅಂಶಗಳು ಇಂದು ಪ್ರಕಟಗೊಳ್ಳುವುದಕ್ಕೆ ಮುನ್ನ ಚೀನ – ಅಮೆರಿಕ ಅಮದು ಸುಂಕ ಕುರಿತ ಮಾತುಕತೆಯ ಮೇಲೆ ಜಾಗತಿಕ ಹೂಡಿಕೆದಾರರು ದೃಷ್ಟಿ ನೆಟ್ಟಿರುವುದೇ ಎಚ್ಚರಿಕೆಯ ನಡೆಗೆ ಕಾರಣವೆಂದು ತಿಳಿಯಲಾಗಿದೆ.
ನಿನ್ನೆ ಗುರುವಾರ ಸೆನ್ಸೆಕ್ಸ್ 73.28 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಏಶ್ಯನ್‌ಪೇಂಟ್, ಇನ್‌ಫೋಸಿಸ್, ವಿಪ್ರೋ, ಸನ್ ಫಾರ್ಮಾ, ಕೋಲ್ ಇಂಡಿಯಾ, ಬಜಾಜ್ ಆಟೋ, ಆರ್‌ಐಎಲ್, ಎನ್‌ಟಿಪಿಸಿ, ಆ್ಯಕ್ಸಿಸ್ ಬ್ಯಾಂಕ್, ಮಾರುತಿಸುಜುಕಿ, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಟಾಟಾ ಸ್ಟೀಲ್ ಶೇರುಗಳು ಶೇ.2ರ ನಷ್ಟಕ್ಕೆ ಗುರಿಯಾದವು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 138.57 ಅಂಕಗಳ ನಷ್ಟದೊಂದಿಗೆ 34,964.57 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44.30 ಅಂಕಗಳ ನಷ್ಟದೊಂದಿಗೆ 10,635.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಭಾರ್ತಿ ಏರ್‌ಟೆಲ್, ವೇದಾಂತ, ಟಿಸಿಎಸ್, ಪವರ್ ಗ್ರಿಡ್, ಎಚ್‌ಸಿಲ್ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.