ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಉತ್ತಮ ಏರಿಕೆಯನ್ನು ಕಂಡ ಹೊರತಾಗಿಯೂ ಅನಂತರದಲ್ಲಿ ಏಳು ಬೀಳುಗಳನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ, ದಿನದ ವಹಿವಾಟನ್ನು 218.78 ಅಂಕಗಳ ನಷ್ಟದೊಂದಿಗೆ 34,981.02 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಕಳೆದ ಎರಡು ದಿನಗಳ ಸೋಲಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 575 ಅಂಕಗಳನ್ನು ಕಳೆದುಕೊಂಡಿತ್ತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 73.30 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,526.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಪಿಎಸ್‌ಯು, ಮೆಟಲ್, ಆಟೋ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳು ವ್ಯಾಪಕ ನಷ್ಟಕ್ಕೆ ಗುರಿಯಾದವು. ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿಬಂದ ದುರ್ಬಲ ಪ್ರವೃತ್ತಿ ಮತ್ತು ವಿದೇಶಿ ಬಂಡವಾಳದ ಹೊರ ಹರಿವು ಮುಂಬಯಿ ಶೇರು ಪೇಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.
ಡಾಲರ್ ಎದುರು ರೂಪಾಯಿ ನಿರಂತರ ಚೇತರಿಕೆಯನ್ನು ತೋರಿಸುತ್ತಿದ್ದು ಇಂದು ಗುರುವಾರ ರೂಪಾಯಿ 45 ಪೈಸೆಗಳ ಏರಿಕೆಯನ್ನು ದಾಖಲಿಸಿ 71.01 ರೂ. ಮಟ್ಟಕ್ಕೇರುವಲ್ಲಿ ಸಫಲವಾಯಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,758 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,106 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,497 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 155 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.