ಮುಂಬಯಿ : ಉತ್ತರ ಕೊರಿಯ ತಾನು ಇನ್ನೊಂದು ಹೈಡ್ರೋಜನ್ ಬಾಂಬ್ ಪರೀಕ್ಷೆ ಕೈಗೊಳ್ಳುವುದಾಗಿ ಒಡ್ಡಿದ ಬೆದರಿಕೆಯಿಂದ ವಿಶ್ವಾದ್ಯಂತ ಶೇರು ಮಾರುಕಟ್ಟೆಗಳು ನಲುಗಿರುವಂತೆಯೇ ಇಂದು ಶುಕ್ರವಾರದ ಮಧ್ಯಾಹ್ನದ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 400ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.
ರಿಯಲ್ಟಿ, ಬ್ಯಾಂಕಿಂಗ್, ಹಣಕಾಸು, ಕ್ಯಾಪಿಟಲ್ ಗೂಡ್ಸ್ ರಂಗದ ಶೇರುಗಳು ತೀವ್ರ ಮಾರಾಟದ ಒತ್ತಕ್ಕೆ ಗುರಿಯಾದವು. ಪರಿಣಾಮವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,000ಕ್ಕಿಂತ ಕೆಳ ಮಟ್ಟಕ್ಕೆ ಜಾರಿ 9,977.10 ಅಂಕಗಳ ಮಟ್ಟಕ್ಕೆ ಕುಸಿಯಿತು.
‘ಉತ್ತರ ಕೊರಿಯವನ್ನುನಿರ್ನಾಮ ಮಾಡುವುದು ನಮಗೆ ಕಷ್ಟದ ಕೆಲಸವೇನೂ ಅಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಿಗೇ ಉತ್ತರ ಕೊರಿಯ, ತಾನು ಶಾಂತ ಸಾಗರದಲ್ಲಿ ಇನ್ನೊಂದು ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಕೈಗೊಳ್ಳುವುದಾಗಿ ಬೆದರಿಕೆ ಹಾಕಿತು.
ಈ ನಡುವೆ ಡಾಲರ್ ಎದುರು ಕುಸಿದ ರೂಪಾಯಿ ದರ 4 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದು ಶೇರು ಮಾರುಕಟ್ಟೆಗೆ ಆಘಾತ ಒಡ್ಡಿತು.
ವಾರದ ಕೊನೇ ದಿನವಾದ ಇಂದು ಶುಕ್ರವಾರದ ವಹಿವಾಟನ್ನು ಸೆನ್ಸೆಕ್ಸ್ 457.99 ಅಂಕಗಳ ನಷ್ಟದೊಂದಿಗೆ 31,912.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತಾದರೆ, ನಿಫ್ಟಿ 161.05 ಅಂಕಗಳ ನಷ್ಟದೊಂದಿಗೆ 9,960.85 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಮುಗಿಸಿತು.
ಬ್ಯಾಂಕ್ ನಿಫ್ಟಿ 441.75 ಅಂಕಗಳ ನಷ್ಟವನ್ನು ಅನುಭವಿಸಿದರೆ, ಐಟಿ ನಿಫ್ಟಿ 31.50 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಇಂದಿನ ಟಾಪ್ ಗೇನರ್‌ಗಳು : ಎಚ್ ಸಿ ಎಲ್ ಟೆಕ್, ವಿಪ್ರೋ, ಭಾರ್ತಿ ಇನ್‌ಫ್ರಾಟೆಲ್;
ಟಾಪ್ ಲೂಸರ್‌ಗಳು : ಟಾಟಾ ಸ್ಟೀಲ್, ಹಿಂಡಾಲ್ಕೋ, ಎಸ್ ಬ್ಯಾಂಕ್, ಅಲ್‌ಟ್ರಾ ಟೆಕ್ ಸಿಮೆಂಟ್, ವೇದಾಂತ.