ಮುಂಬಯಿ : ಅಮೆರಿಕ ಮತ್ತು ಉತ್ತರ ಕೊರಿಯ ನಡುವಿನ ಐತಿಹಾಸಿಕ ಶೃಂಗದ ಧನಾತ್ಮಕ ಯಶಸ್ಸನ್ನು ಹೂಡಿಕೆದಾರರು ಮತ್ತು ವಹಿವಾಟುದಾರರು ಸ್ವಾಗತಿಸಿರುವುದನ್ನು ಅನುಸರಿಸಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಗರಿಗೆದರಿದೆ.
ಅಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 209.05 ಅಂಕಗಳ ಉತ್ತಮ ಮುನ್ನಡೆಯೊಂದಿಗೆ ಕೊನೆಗೊಳಿಸಿದೆ. ಅಂತೆಯೇ ಇವತ್ತು ಸೆನ್ಸೆಕ್ಸ್ ನಾಲ್ಕು ತಿಂಗಳ ಗರಿಷ್ಠ ಮಟ್ಟವಾಗಿ 35,692.52 ಅಂಕಗಳ ಮಟ್ಟವನ್ನು ತಲುಪಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 55.90 ಅಂಕಗಳ ಉತ್ತಮ ಮುನ್ನಡೆಯನ್ನು ದಾಖಲಿಸಿ 10,842.85 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದೆ.
ಈ ವರ್ಷ ಫೆಬ್ರವರಿ 1ರಂದು ಸೆನ್ಸೆಕ್ಸ್ 35,906.66 ಅಂಕಗಳ ಎತ್ತರವನ್ನು ಕಂಡಿತ್ತು. ಅನಂತರದಲ್ಲಿ ಸೆನ್ಸೆಕ್ಸ್ ಕಂಡಿರುವ ಎತ್ತರವೇ ಇಂದಿನದ್ದಾಗಿದೆ.
ನಿನ್ನೆ ಸೋಮವಾರ ದೇಶೀಯ ಹೂಡಿಕೆದಾರರ ಸಂಸ್ಥೆಗಳು 1,062.82 ಕೋಟಿ ರೂ. ಶೇರನ್ನು ಖರೀದಿಸಿದ್ದರು; ವಿದೇಶಿ ಹೂಡಿಕೆದಾರರು 1,156.77 ಕೋಟಿ ಶೇರುಗಳನ್ನು ಮಾರಿದ್ದರು.
ಇಂದು ಮುಂಬಯಿ ಶೇರು ಪೇಟೆಯಲ್ಲಿ ಒಟ್ಟು 2,806 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟಿದ್ದವು; 1,441 ಶೇರುಗಳು ಮುನ್ನಡೆ ಕಂಡವು; 1,222 ಶೇರುಗಳು ಹಿನ್ನಡೆಗೆ ಗುರಿಯಾದವು; 143 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.